ಹುಬ್ಬಳ್ಳಿ: ಪ್ರೀತಿಸಿ ಮದುವೆಯಾಗಿದ್ದ ಯುವಕನ ಮನೆಗೆ ಹೋಗಿದ್ದ ಯುವತಿಯನ್ನು ಆಕೆಯ ಪೋಷಕರು ಯುವಕನ ಮನೆಗೆ ನುಗ್ಗಿ ಎಳೆದುಕೊಂಡು ಹೋಗಿರುವ ಘಟನೆ ಇಲ್ಲಿನ ಭೈರಿದೇವರಕೊಪ್ಪದಲ್ಲಿ ನಡೆದಿದೆ.
ಭೈರಿದೇವರಕೊಪ್ಪದ ಯುವಕ ನಿರಂಜನ್ ಹಾಗೂ ಯುವತಿ ಸುಷ್ಮಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ವರ್ಷದ ಹಿಂದೆ ಗದಗನಲ್ಲಿ ರಿಜಿಸ್ಟರ್ ಮದುವೆ ಕೂಡ ಆಗಿದ್ದು, ಪೋಷಕರ ವಿರೋಧಕ್ಕೆ ದೂರವಾಗಿದ್ದರು. ಪ್ರೀತಿಸಿದ ಯುವಕನನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದು ಯುವತಿ ಆತನ ಮನೆಗೆ ಹೋಗಿದ್ದಾಳೆ. ಈ ವೇಳೆ ಯುವತಿಯ ಪೋಷಕರು ಯುವಕನ ಮನೆಗೆ ನುಗ್ಗಿ ಯುವತಿಯನ್ನು ಎಳೆದುಕೊಂಡು ಹೋಗಿದ್ದಾರೆ.
ಇದರಿಂದ ಯುವಕ ನವನಗರ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದು, ಪೊಲೀಸರು ಎರಡು ಕಡೆಯವರಿಗೆ ಕರೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರೀತಿಸಿದ ಯುವಕನ ಜೊತೆ ಇರುವುದಾಗಿ ಯುವತಿ ಹೇಳಿದ್ದಾಳೆ. ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.