ಪ್ರಾಣಿಗಳಿಗೆ ಮನುಷ್ಯ ಜ್ವರ

ಹಕ್ಕಿಜ್ವರ… ಇಲಿಜ್ವರ… ಆ ಜ್ವರ.. ಈಜ್ವರ ಎಂದು ಬಂದು ಸಮಸ್ತ ಪ್ರಾಣಿಲೋಕ ವಿಲವಿಲ ಒದ್ದಾಡಿದವು. ನಾವು ದೇವರ ಹತ್ತಿರ ಹೋಗಿ ಕೇಳೋಣ… ಹೇ ಭಗವಂತಾ… ನಮಗೇಕೆ ಈ ಶಿಕ್ಷೆ… ಇದರಿಂದ ನಮ್ಮನ್ನು ಪಾರು ಮಾಡು ಎಂದು ತಪಸ್ಸು ಮಾಡೋಣ ಎಂದು ಸಮಸ್ತ ಪ್ರಾಣಿಪಕ್ಷಿಗಳು ತಪಸ್ಸಿಗೆ ಕುಳಿತವು. ಇವುಗಳ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ದೇವರು… ಹೇ ನಿಮ್ಮ ತಪಸ್ಸಿಗೆ ಮೆಚ್ಚಿದೆ… ನಿಮಗೇನು ವರಬೇಕು ಕೇಳಿ ಅಂದಾಗ… ಹೇ ಮಹಾಪ್ರಭು… ನಮಗೆ ಸುಖಾ ಸುಮ್ಮನೇ ಆ ಜ್ವರ… ಈ ಜ್ವರ ಅಂತ ಹಣ್ಣುಗಾಯಿ… ನೀರುಗಾಯಿ ಮಾಡುತ್ತಿರುವಿರಿ… ಹಕ್ಕಿಜ್ವರ ಎಂಬ ಹೆಸರಿನಿಂದ ಇಡೀ ನಮ್ಮ ಕುಲವನ್ನೇ ನಾಶ ಮಾಡುತ್ತಿದ್ದಾರೆ. ನಮಗೆ ಇದರಿಂದ ಮುಕ್ತಿ ಗೊಳಿಸಿ ಎಂದು ಕೋಳಿ ಲೀಡರ್ ಅಂದಾಗ ಗೊಂದಲಕ್ಕೆ ಬಿದ್ದ ದೇವರು.. ಅಲ್ರಪಾ… ಹಂಗೆಲ್ಲ ಜ್ವರಗಳನ್ನು ಚೇಂಜ್ ಮಾಡಲು ಬರುವುದಿಲ್ಲ. ತಡೀರಿ ಎಂದು ಐದು ನಿಮಿಷ ಸುಮ್ಮನಿದ್ದು… ಹಾಂ… ನನ್ನ ಕಡೆ ಒಂದು ಆಪ್ಶನ್ ಇದೆ. ನಿಮಗೆ ಸ್ವಲ್ಪ ಅನುಕೂಲವಾಗಬಹುದು ಎಂದು ಹೇಳಿದರು. ಅದಕ್ಕೆ ಏನು ಆಪ್ಶನ್ ಸ್ವಾಮಿ ಅಂದಾಗ… ನೋಡಿ ಈ ಜ್ವರಗಳು ನಿಮಗೆ ಅಷ್ಟೊಂದು ತ್ರಾಸ ಕೊಡುತ್ತಿದ್ದರೆ ನೀವು ಮಾನವ ಜ್ವರವನ್ನು ತೆಗೆದುಕೊಳ್ಳಬಹುದು.
ಮನುಷ್ಯರಿಗೆ ಜ್ವರ ಬಂದರೆ ಡಾಕ್ಟರ್ ಕಡೆ ಹೋದರೆ ಅರಾಮಾಗುತ್ತೆ. ನಿಮಗೂ ಆ ಅನುಕೂಲತೆ ದೊರಕಿಸಿಕೊಡಲಾಗುವುದು ಅಂದಾಗ… ಎಲ್ಲ ಪ್ರಾಣಿಪಕ್ಷಿಗಳು ಎಸ್ ಅಂದವು… ದೇವರು ತಥಾಸ್ತು ಎಂದು ಹೇಳಿಮಾಯವಾದ. ಅದಾಗಿ ಸ್ವಲ್ಪ ದಿನಕ್ಕೆ ಬಹುತೇಕ ಪ್ರಾಣಿ ಪಕ್ಷಿಗಳಿಗೆ ಮಾನವ ಜ್ವರ ಆರಂಭವಾಯಿತು. ಪ್ರಾಣಿ ಪಕ್ಷಿಗಳು ತೀರ ತೊಂದರೆಗೊಳಗಾದರು.
ಡಾಕ್ಟರ್ ಕಡೆ ಹೋದರೆ..ಅಯ್ಯೋ ಮಾನವ ಜ್ವರ …? ಅದು ಬಂದರೆ ಬಹುಕೋದೇ ಡೌಟು ಎಂದು ಹೇಳತೊಡಗಿದರು. ಈ ಜ್ವರಕ್ಕೆ ಅಷ್ಟು ಖರ್ಚಾಗುತ್ತೆ..ಇಷ್ಟು ಖರ್ಚಾಗುತ್ತೆ ಅಂದರು.
ಖರ್ಚಿಗೆ ಹೆದರಿಕೊಂಡೇ ಅನೇಕ ಪ್ರಾಣಿ ಪಕ್ಷಿಗಳು ಪ್ರಾಣಬಿಟ್ಟವು. ಮತ್ತೆ ಎಲ್ಲವೂ ಸೇರಿ ಇದೇನಿದು… ಮಾನವನ ಹೆಸರಿನ ಜ್ವರ ಅಷ್ಟೊಂದು ಕೆಟ್ಟದ್ದಾ ಅಂತ ಯೋಚನೆ ಮಾಡಿದವು. ನಂತರ ಮತ್ತೆ ತಪಸ್ಸಿಗೆ ಕುಳಿತವು… ಧರೆಗಿಳಿದು ಬಂದ ದೇವರು… ನಿಮ್ ಪ್ರಾಬ್ಲಂ ಏನು ಅಂದಾಗ… ಸ್ವಾಮೀ ನಮಗೆ ಮೊದಲು ಹೆಂಗೆ ಜ್ವರ ಇದ್ದವೋಅಂಥದ್ದೇ ಜ್ವರ ಇರಲಿ ಈ ಮಾನವ ಜ್ವರಮಾತ್ರ ಬೇಡ ಎಂದು ಅಂದವು. ತಡಿ ಬಂದೆ ಎಂದು ಹೇಳಿ ಆ ದೇವರು ಮಾಯವಾದ.