ಯಲ್ಲಾಪುರ(ಕಾರವಾರ): ತಾಲೂಕ ಪಂಚಾಯತ್ ವ್ಯಾಪ್ತಿಯ ದೊಡ್ಡಯಲವಳ್ಳಿ ಶಾಲೆಗೆ ಸಣ್ಣಯಲವಳ್ಳಿ ಗ್ರಾಮದ ಮಕ್ಕಳು ವಿದ್ಯೆ ಕಲಿಯಲು ಹೋಗಬೇಕೆಂದರೆ ಸಮವಸ್ತ್ರ ರಾಡಿಯಾಗುವಂತೆ ಕೆಸರಿನಲ್ಲಿಯೇ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.
ಸಣ್ಣಯಲವಳ್ಳಿಯಲ್ಲಿ ಸುಮಾರು 35 ಕುಟುಂಬಗಳು ವಾಸಿಸುತ್ತಿದ್ದು ಕೃಷಿ ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ಮಕ್ಕಳು ವಿದ್ಯೆ ಕಲಿಯಲಿ ಎಂಬ ಮಹದಾಸೆಯಿಂದ ಕೂಲಿನಾಲಿ ಮಾಡಿ ಮಕ್ಕಳನ್ನು ಶಾಲೆಗೆ ಕಳಿಸಲಾಗುತ್ತಿದೆ. ಸಣ್ಣಯಲವಳ್ಳಿಯಲ್ಲಿ 5ನೇ ತರಗತಿ ವರೆಗೆ ಶಾಲೆ ಇದ್ದು ಮುಂದಿನ ವಿದ್ಯಾಭ್ಯಾಸಕ್ಕೆ ದೊಡ್ಡ ಯಲವಳ್ಳಿಗೆ ಹೋಗಬೇಕಿದೆ. ಆದರೆ ಹೋಗುವ ಮಾರ್ಗದಲ್ಲಿ ಹಳ್ಳ ಹರಿಯುತ್ತಿದ್ದು ಮಳೆಗಾಲದಲ್ಲಿ ಹರಸಾಹಸ ಮಾಡಿ ಸಂಚರಿಸುವಂತಾಗಿದೆ.
ಶಾಲೆಗೆ ಹೋಗದೇ ಮಕ್ಕಳು ಮನೆಗೆ ವಾಪಸ್ ಹೋಗಬೇಕು ಅಥವಾ ಶಾಲೆ ಬಿಟ್ಟಾಗ ಮನೆಗೆ ತೆರಳಲು ಹಳ್ಳ ತುಂಬಿದ್ದರೆ ದಡದಲ್ಲೆ ನಿಂತು ನೀರು ತಗ್ಗುವುದನ್ನು ಕಾಯಬೇಕು. ಇಲ್ಲ ರಾತ್ರಿ ದಡದಲ್ಲೇ ವಾಸ್ತವ್ಯ ಮಾಡಬೇಕಾದ ಸ್ಥಿತಿ ಇದೆ. ಕೇವಲ ಮಕ್ಕಳು ಮಾತ್ರವಲ್ಲ. ಎರಡು ಊರಿನವರ ಸಾರ್ವಜನಿಕರ ಸಂಚಾರಕ್ಕೂ ಈ ಹಳ್ಳ ಸಂಚಕಾರವಾಗಿದೆ.
ಶಾಶ್ವತ ಸೇತುವೆ ನಿರ್ಮಿಸಿ
ಮಕ್ಕಳ ಸಮಸ್ಯೆ ಹಿನ್ನೆಲೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಸೂಚನೆ ಮೇರೆಗೆ ಜಿಪಂ ಎಇಇ ಅಶೋಕ್ ಬಂಟ್, ಕಿರವತ್ತಿ ಪಂಚಾಯತ್ ಅಧಿಕಾರಿ ಅಣ್ಣಪ್ಪ ವಡ್ಡರ್ ಹಾಗು ಇತರೆ ಅಧಿಕಾರಿಗಳು ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿನ ಸಾರ್ವಜನಿಕರಿಗೆ ಕಾಲುಸಂಕ ನಿರ್ಮಿಸಿಕೊಡುವ ಮಾತನ್ನಾಡಿದರೆ ಬೇಡ ಶಾಶ್ವತ ರೀತಿಯಲ್ಲಿ ಸೇತುವೆ ನಿರ್ಮಿಸಲು ಕೋರುತ್ತಿದ್ದಾರೆ. ಸದ್ಯ ಸೇತುವೆ ನಿರ್ಮಾಣಕ್ಕೆ ೭೫ರಿಂದ ೯೫ ಲಕ್ಷದವರೆಗೆ ವೆಚ್ಚವಾಗಬಹುದೆಂದು ಶಾಸಕರಿಗೆ ಅಂದಾಜು ವಿವರ ಸಲ್ಲಿಸಿದ್ದಾರೆ.