ಹಾವೇರಿ(ಹಾನಗಲ್ಲ): ಪಟ್ಟಣದ ಪ್ರಭಾವಿ ವ್ಯಕ್ತಿ ತಂಗಿದ್ದ ಸ್ಥಳದ ಕುರಿತು ಲೋಕೇಶನ್ ಸಹಿತ ಬೇರೆಯವರಿಗೆ ಮಾಹಿತಿ ನೀಡಿದ ಆರೋಪದಡಿ ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್(ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಲೋಕೇಶನ್‌ನಿಂದ ಸಮಸ್ಯೆಗೆ ಸಿಲುಕಿದ ಹಾನಗಲ್ ಪಟ್ಟಣದ ಪ್ರಭಾವಿ ವ್ಯಕ್ತಿ ನೀಡಿದ ಮಾಹಿತಿ ಅನ್ವಯ ಪ್ರಾಥಮಿಕ ತನಿಖೆ ನಡೆಸಿ ವರದಿ ಪಡೆದಿದ್ದ ದಾವಣಗೆರೆ ವಲಯದ ಐಜಿಪಿ ರವಿಕಾಂತೇಗೌಡ ಅವರು ಸಿಪಿಐ ಆಂಜನೇಯ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಐಜಿಪಿ ಆದೇಶ ಉಲ್ಲೇಖಿಸಿ ಮತ್ತೊಂದು ಆದೇಶ ಹೊರಡಿಸಿರುವ ಜಿಲ್ಲಾ ಎಸ್ಪಿ ಅಂಶುಕುಮಾರ, ಸಿಪಿಐ ಆಂಜನೇಯ ಅವರನ್ನು ಜೂ. ೧೫ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅವರಿಂದ ತೆರುವಾದ ಸ್ಥಾನಕ್ಕೆ ಪ್ರಭಾರಿಯಾಗಿ ಶಿಗ್ಗಾವಿ ಸಿಪಿಐ ಅನಿಲ್‌ಕುಮಾರ ರಾಠೋಡ್ ಅವರನ್ನು ನಿಯೋಜಿಸಲಾಗಿದೆ.
ಅಪರಾಧ ಪ್ರಕರಣಗಳ ತನಿಖೆ ಸಂದರ್ಭದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಲೋಕೇಶನ್ ತಿಳಿದುಕೊಳ್ಳುವ ಅವಕಾಶ ಪೊಲೀಸರಿಗಿದೆ. ಆದರೆ, ಸಿಪಿಐ ಆಂಜನೇಯ ಅವರು ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.