ಪ್ರಧಾನಿ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮ ಅವರು ಘಾನಾದ ರಾಷ್ಟ್ರೀಯ ಗೌರವವಾದ ‘ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
ಮೋದಿ ಅವರ ವಿಶಿಷ್ಟ ರಾಜನೀತಿ ಮತ್ತು ಪ್ರಭಾವಶಾಲಿ ಜಾಗತಿಕ ನಾಯಕತ್ವಕ್ಕಾಗಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪೋಸ್ಟ್‌ ಮಾಡಿದ್ದು, ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ಪ್ರಶಸ್ತಿಗೆ ಭಾಜನರಾಗಲು ಹೆಮ್ಮೆಯಾಗುತ್ತದೆ. ಈ ಗೌರವವು ನಮ್ಮ ಯುವಕರ ಉಜ್ವಲ ಭವಿಷ್ಯ, ಅವರ ಆಕಾಂಕ್ಷೆಗಳು, ನಮ್ಮ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಭಾರತ ಮತ್ತು ಘಾನಾ ನಡುವಿನ ಐತಿಹಾಸಿಕ ಸಂಬಂಧಗಳಿಗೆ ಸಮರ್ಪಿತವಾಗಿದೆ ಎಂದು ಮೋದಿ ಹೇಳಿದ್ದಾರೆ. ಈ ಗೌರವವು ಒಂದು ಜವಾಬ್ದಾರಿಯೂ ಆಗಿದೆ; ಭಾರತ-ಘಾನಾ ಸ್ನೇಹವನ್ನು ಬಲಪಡಿಸುವತ್ತ ಶ್ರಮಿಸುವುದನ್ನು ಯಾವತ್ತೂ ಮುಂದುವರಿಸಬೇಕು. ಭಾರತವು ಯಾವಾಗಲೂ ಘಾನಾದ ಜನರೊಂದಿಗೆ ನಿಲ್ಲುತ್ತದೆ ಮತ್ತು ವಿಶ್ವಾಸಾರ್ಹ ಸ್ನೇಹಿತ ಮತ್ತು ಅಭಿವೃದ್ಧಿ ಪಾಲುದಾರನಾಗಿ ಕೊಡುಗೆ ನೀಡುವುದನ್ನು ಮುಂದುವರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.