ಹೊಸಪೇಟೆ: ಪ್ರಧಾನಿ ಮೋದಿ, ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನನಗೆ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಅವಕಾಶ ಕೊಟ್ಟರೆ ನಾನೇ ಪಾಕಿಸ್ತಾನಕ್ಕೆ ಹೋಗಿ ಯುದ್ಧ ಮಾಡುವೆ. ನನಗೆ ನನ್ನ ದೇಶ ಮುಖ್ಯ ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದರು.
ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕೆ.ಡಿ.ಪಿ. ಸಭೆಯ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾವು ಭಾರತೀಯರು, ನಾವು ಇಲ್ಲಿಯೇ ಹುಟ್ಟಿದ್ದೇವೆ, ಇಲ್ಲೇ ಸಾಯುತ್ತವೆ, ನಮಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು. ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ನಾನು ಸಿದ್ಧ, ಪ್ರಧಾನಿಗಳು ಅವಕಾಶ ನೀಡಿ ಕಳುಹಿಸಿದರೆ ನಾನು ಹೋಗಲು ಸಿದ್ಧ ಎಂದ ಅವರು, ದೇಶಕ್ಕೆ ನನ್ನ ಅಗತ್ಯ ಇದ್ದರೆ ನನಗೆ ಪ್ರಧಾನಿ ಅವರು ಸೂಸೈಡ್ ಬ್ಯಾಗ್ ನೀಡಲಿ. ನಾನು ದೇವರ ಮೇಲಾಣೆ ಮಾಡಿ ಹೇಳುತ್ತೇನೆ ನಾನು ಪಾಕಿಸ್ತಾನಕ್ಕೆ ಹೋಗಲು ಸಿದ್ಧ ಎಂದು ಎದೆ ತಟ್ಟಿ, ತಟ್ಟಿ ಹೇಳಿದರು. ಪಾಕಿಸ್ತಾನ ಯಾವತ್ತಿಗೂ ನಮ್ಮ ಶತ್ರು ದೇಶನೇ ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಯುದ್ಧ ಸಾರಲಿ ಎಂದರು.
ಯತ್ನಾಳಗೆ ಸವಾಲು:
ಸಚಿವ ಶಿವಾನಂದ ಪಾಟೀಲ್ ಮತ್ತು ಯತ್ನಾಳ್ ರಾಜೀನಾಮೆ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯತ್ನಾಳ್ ಅವರು, ಪದೇ, ಪದೇ, ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಾರೆ, ಸಚಿವ ಶಿವಾನಂದ ಪಾಟೀಲ್, ದಮ್ಮು ತಾಕತ್ತು ತೋರಿಸಿದ್ದಾರೆ. ಅದೇ ರೀತಿ ಯತ್ನಾಳ್ ರಾಜೀನಾಮೆ ನೀಡಿ ತಾಕತ್ತು ತೋರಿಸಲಿ ಎಂದು ಸವಾಲು ಹಾಕಿದರು.