ಚಿಕ್ಕಮಗಳೂರು: ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ವಾತಂತ್ರ‍್ಯ ಇದೆ. ಅವರ ಅಭಿಪ್ರಾಯ ಅವರು ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲೂ ನಿಮಗೆ ಸಿನಿಮಾ ರೀತಿಯ ಸ್ಕ್ರೀಪ್ಟ್ ಇರುವುದಿಲ್ಲ. ಇಲ್ಲಿ ಏಳು-ಬೀಳು, ಅಡಕು-ತೊಡಕು ಇರುತ್ತದೆ. ಅದರ ಮಧ್ಯೆಯೂ ಕೆಲಸ ಮಾಡೋದಕ್ಕೆ ಜನ ಆಯ್ಕೆ ಮಾಡಿರುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ನಗರದ ಜಿಪಂ ನಜೀರ್‌ಸಾಬ್ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಇಲಾಖೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ನಂತರ, ಸೆಪ್ಟೆಂಬರ್ ಬಳಿಕ ಬದಲಾವಣೆ ಕುರಿತು ಸಚಿವ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಷ್ಟು ದಿನ ಇರುತ್ತೇವೆಯೋ ಗೊತ್ತಿಲ್ಲ. ಇರುವಷ್ಟು ದಿನ ಜನಕ್ಕೆ ಒಳ್ಳೆ ಕೆಲಸ ಮಾಡೋಣ. ಯಾವ ಬದಲಾವಣೆ ಗೊತ್ತಿಲ್ಲ ನನಗೆ ಕಂದಾಯ ಇಲಾಖೆಯಲ್ಲಿ ಬದಲಾವಣೆ ಮಾಡೋದು ಗೊತ್ತು ಎಂದರು.
ಕಂದಾಯ ಇಲಾಖೆಯಲ್ಲಿ ಬದಲಾವಣೆ ಮಾಡಲು ಮುಖ್ಯಮಂತ್ರಿ, ಪಕ್ಷ ಹೇಳಿದೆ. ಬೇರೆ ಬದಲಾವಣೆ ಬಗ್ಗೆ ಗೊತ್ತಿಲ್ಲ, ಅದು ನನಗೆ ಬೇಕಾಗಿಯೂ ಇಲ್ಲ. ಯಾವ ಜನ್ಮದ ಪುಣ್ಯಾನೋ ಏನೋ ಈ ಕೆಲಸ ಮಾಡೋ ಅವಕಾಶ ಸಿಕ್ಕಿದೆ ಅಷ್ಟು ಸಾಕು ಎಂದರು.
ಮೂಲ ಭೂಮಿ ಮಂಜೂರುದಾರರಿಗೆ ಪೋಡಿ ದುರಸ್ತಿಯಾಗಿಲ್ಲ. ನಾವೇ ಮನೆ ಬಾಗಿಲಿಗೆ ತೆರಳಿ 1.2 ಲಕ್ಷ ಭೂಮಿ ಅಳತೆ ತೆಗೆದು ಕೊಂಡಿದ್ದೇವೆ. ದಾಖಲೆ ಇಲ್ಲದ ವಸತಿ ಪ್ರದೇಶಗಳಿಗೆ ದಾಖಲೆ ನೀಡುತ್ತಿದ್ದೇವೆ. 60-70 ಸಾವಿರ ಮನೆಗಳನ್ನು ಗುರುತಿಸಿ ಹಕ್ಕುಪತ್ರ ನೀಡುತ್ತಿದ್ದೇವೆ. ಕಂದಾಯ ಗ್ರಾಮ ಘೋಷಣೆಗೆ 300-500 ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.