ಪ್ಯಾಸೆಂಜರ್ ರೈಲುಗಾಡಿ ವಿಳಂಬ:  ಪ್ರಯಾಣಿಕರ ಪರದಾಟ

ಚಾಮರಾಜನಗರದಿಂದ ಮೈಸೂರು ಮಾರ್ಗವಾಗಿ ಬೆಂಗಳೂರು ಮೂಲಕ ತುಮಕೂರಿಗೆ ತೆರಳುವ ಪ್ಯಾಸೆಂಜರ್ ರೈಲುಗಾಡಿಯು ಇಂಜಿನ್ ವ್ಯತ್ಯಯದಿಂದ ಎರಡು ಗಂಟೆಗೂ ಹೆಚ್ಚು ಕಾಲ ತಡವಾಗಿ ಮೈಸೂರು, ಮಂಡ್ಯ ಹಾಗೂ ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರಿಂದ ಪ್ರಯಾಣಿಕರು‌ ಪರದಾಡುವಂತಾಯಿತು

ಮಂಡ್ಯ: ಪ್ರತಿದಿನ ಚಾಮರಾಜನಗರದಿಂದ ತುಮಕೂರಿಗೆ ತೆರಳುವ ಪ್ಯಾಸೆಂಜರ್ ರೈಲುಗಾಡಿಯು ನಿಗದಿತ ಸಮಯಕ್ಕೆ ಮಂಡ್ಯ ಹಾಗೂ  ಪಾಂಡವಪುರ ನಿಲ್ದಾಣಕ್ಕೆ ಬಾರದ ಕಾರಣ ದೂರದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಗಂಟೆಗಟ್ಟಲೇ ರೈಲ್ವೆ ನಿಲ್ದಾಣದಲ್ಲೇ ಕಾದು ಕುಳಿತುಕೊಳ್ಳಬೇಕಾದ ಸನ್ನಿವೇಶ ಸೃಷ್ಠಿಯಾಯಿತು.

ಬೆಳಗ್ಗೆ 9ಕ್ಕೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಚಾಮರಾಜನಗರ-ತುಮಕೂರು ಪ್ಯಾಸೆಂಜರ್ ರೈಲುಗಾಡಿಯು ಇಂಜಿನ್ ವ್ಯತ್ಯಯದಿಂದಾಗಿ ನಂಜನಗೂಡಿನ ರೈಲ್ವೆ ನಿಲ್ದಾಣದಲ್ಲಿಯೇ ನಿಂತಿದ್ದರಿಂದ ಎರಡು ಗಂಟೆಗೂ ಹೆಚ್ಚು ಕಾಲ‌ ಅಂದರೆ ಬೆಳಗ್ಗೆ 11.05ಕ್ಕೆ ಮೈಸೂರಿಗೆ ಆಗಮಿಸಿತು. ಹಾಗೆಯೇ 9.28ಕ್ಕೆ ಪಾಂಡವಪುರಕ್ಕೆ ಆಗಮಿಸಬೇಕಾಗಿದ್ದ ರೈಲು 11.41ಕ್ಕೆ
ಪಾಂಡವಪುರ ರೈಲ್ವೆ ನಿಲ್ದಾಣಕ್ಕೆ ತಲುಪಿತು. 10.10ಕ್ಕೆ ಮಂಡ್ಯ ತಲುಪಬೇಕಿದ್ದ ರೈಲು 12.21ಕ್ಕೆ ಆಗಮಿಸಿತು. ಇದರಿಂದಾಗಿ ಮಂಡ್ಯ, ರಾಮನಗರ, ಕೆಂಗೇರಿ, ಬೆಂಗಳೂರು, ತುಮಕೂರಿಗೆ ತೆರಳಬೇಕಿದ್ದ ಪ್ರಯಾಣಿಕರು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕೆ ತೆರಳಬೇಕಾಗಿದ್ದ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಪಜೀತಿ ಅನುಭವಿಸುವಂತಾಯಿತು.

ಈ ವೇಳೆ ಕೆಲವರು ಪ್ಯಾಸೆಂಜರ್ ರೈಲುಗಾಡಿ ವಿಳಂಬವಾಗಿ ಆಗಮಿಸುವ ಸುದ್ದಿ ತಿಳಿದು ಬಸ್ ಹಾಗೂ ಇತರೆ ವಾಹನಗಳ ಮೊರೆ ಹೋದರೆ, ಇನ್ನೂ ಕೆಲವರು ರೈಲುಗಾಡಿ ಬರುವವರೆಗೂ ಕಾದು ಪ್ರಯಾಣ ಬೆಳೆಸಿದರು.

ಅದೇ ರೀತಿ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಹಂಪಿ ಎಕ್ಸ್ ಪ್ರೆಸ್, ತುತೂಕುಡಿಯಿಂದ ಬೆಂಗಳೂರು ಮಾರ್ಗವಾಗಿ ಮೈಸೂರು ತಲುಪುವ ಟೂಟಿಕೊರಿಯನ್ (ತುತೂಕುಡಿ) ಎಕ್ಸ್ ಪ್ರೆಸ್,  ಗೋಲ್ ಗುಂಬಜ್ ಎಕ್ಸ್‌ಪ್ರೆಸ್‌, ಬಸವ ಎಕ್ಸ್ ಪ್ರೆಸ್ ಹಾಗೂ  ಬೆಂಗಳೂರು-ಮೈಸೂರು ಅಶೋಕಪುರಂ ಪ್ಯಾಸೆಂಜರ್ ರೈಲು ಕೂಡ ತಡವಾಯಿತು.

ಹೀಗಾಗಿ ಮೈಸೂರಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು, ಇಲಾಖೆ ನೌಕರರು, ಸಾವಿರಾರು ಪ್ರಯಾಣಿಕರು ಮಂಡ್ಯ ಹಾಗೂ ಪಾಂಡವಪುರ ನಿಲ್ದಾಣದಲ್ಲಿ ಕಾದು ಕಾದು ರೈಲ್ವೆ ಅಧಿಕಾರಿಗಳ ವಿರುದ್ಧ ಗೊಣಗಿಕೊಳ್ಳುತ್ತಿದ್ದ ದೃಶ್ಯಾವಳಿಗಳು  ಸಾಮಾನ್ಯವಾಗಿತ್ತು.

ಕಳೆದ ವಾರ ಸೋಮವಾರ ಕೂಡ ಎರಡು ಗಂಟೆ ತಡವಾಗಿ ಚಾಮರಾಜನಗರ-ತುಮಕೂರು ಪ್ಯಾಸೆಂಜರ್ ರೈಲು ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.