ಮಂಡ್ಯ: ನಗರದ ಸ್ವರ್ಣಸಂದ್ರದ ಬಳಿ ಸಂಚಾರಿ ಪೊಲೀಸರು ತಪಾಸಣೆ ನಡೆಸುವ ಸಂದರ್ಭದಲ್ಲಿ ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ವಾಣಿ- ಮಹೇಶ್ (ಅಶೋಕ್) ದಂಪತಿಯ ಮೂರುವರೆ ವರ್ಷದ ಹೆಣ್ಣು ಮಗು ರಿತೀಕ್ಷಾ ಸಾವಿಗೀಡಾಗಿರುವ ಘಟನೆ ನಡೆದಿದೆ.
ಈ ಘಟನೆ ಖಂಡಿಸಿ ಮಗುವಿನ ಪೋಷಕರು ಹಾಗೂ ಸಾರ್ವಜನಿಕರು ಪೊಲೀಸರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಸಂಚಾರಿ ಪೊಲೀಸ್ ಠಾಣೆಯ ಮೂವರು ಎಎಸ್‌ಐಗಳಾದ ಜಯರಾಮ್, ನಾಗರಾಜು ಹಾಗೂ ಗುರುದೇವ್ ಎಂಬುವವರನ್ನು ಅಮಾನತುಗೊಳಿಸಿ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ.
ಏನಿದು ಘಟನೆ ?
ಗೊರವನಹಳ್ಳಿಯ ರತೀಕ್ಷಾಳಿಗೆ ನಾಯಿ ಕಡಿದಿತ್ತು. ಆಕೆಗೆ ಚುಚ್ಚುಮದ್ದು ಹಾಕಿಸಲು ಆಕೆಯ ತಂದೆ-ತಾಯಿಯರಾದ ವಾಣಿ-ಮಹೇಶ್ ಅವರು ಬೈಕಿನಲ್ಲಿ ಕರೆದು ಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ಸ್ವರ್ಣಸಂದ್ರದ ಬಳಿ ಸಂಚಾರಿ ಪೊಲೀಸರು ಬೈಕಿನ ತಪಾಸಣೆಗೆ ಅಡ್ಡಗಟ್ಟಿದ್ದಾರೆ. ಆಗ ಮಹೇಶ್ ಪೊಲೀಸರೊಂದಿಗೆ ಮಾತನಾಡಿ ‘ನನ್ನ ಮಗಳಿಗೆ ನಾಯಿ ಕಚ್ಚಿದೆ’ ತುರ್ತಾಗಿ ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲಿನ ಅವರಿಗೆ ಪೊಲೀಸರು ತೆರಳಲು ಅವಕಾಶ ನೀಡಿದ್ದಾರೆ. ಆದರೆ ಸ್ವಲ್ಪ ಮುಂದೆ ಬಂದ ನಂತರ ಮತ್ತೊಬ್ಬ ಪೊಲೀಸ್, ಬೈಕಿನಲ್ಲಿದ್ದ ಮಹೇಶ್ ಅವರ ಕೈ ಹಿಡಿದು ಎಳೆದಿದ್ದು, ಈ ಸಂದರ್ಭದಲ್ಲಿ ಮಗು ಆಯಾ ತಪ್ಪಿ ರಸ್ತೆಗೆ ಬಿದ್ದಿದೆ. ಆಗ ಹಿಂದಿನಿಂದ ಬಂದ ನಂದಿನಿ ಹಾಲಿನ ವಾಹನ ಆಕೆಯ ಮೇಲೆ ಹರಿದು, ಆಕೆ ಸ್ಥಳದಲ್ಲೆ ಸಾವನ್ನದ್ದಾಳೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಮಂಡ್ಯ ಜಿಲ್ಲಾಸ್ಪತ್ರೆ ಮುಂಭಾಗ ಹೆದ್ದಾರಿಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದರು.