ಜಗಳೂರು: ಕಳ್ಳರು ಪೆಟ್ರೋಲ್ ಸುರಿದು ಎಟಿಎಂ ಒಡೆಯಲು ಯತ್ನಿಸಿದ ಸಂದರ್ಭದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಇದರಿಂದ ಬೆಂಕಿ ಹೊತ್ತಿಕೊಂಡಿದ ತಕ್ಷಣವೇ ಕಳ್ಳರು ಪರಾರಿಯಾಗಿರುವ ಘಟನೆ ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ನಡೆದಿದೆ.
ಬಿಳಿಚೋಡು ಗ್ರಾಮದ ಭರಮಸಾಗರ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನುಗ್ಗಿದ ಕಳ್ಳರು ಕಬ್ಬಿಣದ ಸರಳು ಬಳಸಿ ಹಣವಿದ್ದ ಯಂತ್ರವನ್ನು ಒಡೆಯಲು ಯತ್ನಿಸಿದ್ದಾರೆ. ಇದು ಸಾಧ್ಯವಾಗದೇ ಇದ್ದಾಗ ಪೆಟ್ರೋಲ್ ಸುರಿದಿದ್ದಾರೆ. ಆಗ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದೆ. ದಟ್ಟ ಹೊಗೆ ಆವರಿಸುತ್ತಿದ್ದಂತೆ ಕಳ್ಳರು ಸ್ಥಳದಿಂದ ಕಾಲ್ಕಿತ್ತಿದ್ದು, ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎಟಿಎಂ ಕೇಂದ್ರದಲ್ಲಿ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗಿದೆ. ಪ್ರತೀ ಕೇಂದ್ರದ ಚಲನವಲನಗಳ ಬಗ್ಗೆ ನಿಗಾ ಇರಿಸುವ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಟಿಎಂ ಕೇಂದ್ರದ ಒಳ ನುಗ್ಗಿ ಮಷಿನ್ ತೆರೆಯಲು ಯತ್ನಿಸಿದರೂ, ಹಣ ತುಂಬಿದ ವಿಭಾಗದ ಬಾಗಿಲು ತೆರೆಯಬೇಕಾದರೆ ಒಟಿಪಿ ಆಧಾರಿತ ವ್ಯವಸ್ಥೆ ಅಳವಡಿಸಿದ್ದರಿಂದ್ದ ಕಳ್ಳರಿಗೆ ಹಣ ಕದಿಯಲು ಆಗಿಲ್ಲ.
ಘಟನಾ ಸ್ಥಳಕ್ಕೆ ಧಾವಿಸಿದ ಬಿಳಿಚೋಡು ಪೊಲೀಸರು ಬೆಂಕಿಯನ್ನು ನಂದಿಸಿದ್ದಾರೆ. ಸಿಸಿ ಟಿವಿಯಲ್ಲಿ ಒಬ್ಬನೇ ಕಳ್ಳತನಕ್ಕೆ ಪ್ರಯತ್ನಿಸಿರುವುದು ಕಂಡು ಬಂದಿದೆ. ಶ್ವಾನದಳ, ಬೆರಳಚ್ಚು ಸಿಬ್ಬಂದಿ ಹಾಗೂ ಸಿಪಿಐ ನಾಗರಾಜ್, ಎಸ್.ಐ. ರಮೇಶ್ ನೇತೃತ್ವದಲ್ಲಿ ಸಿಬ್ಬಂದಿ ಕರಿಯಪ್ಪ, ಪ್ರವೀಣ್ ಪರಿಶೀಲನೆ ನಡೆಸಿದರು. ಈ ಕುರಿತು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.