ಪಾಲಿಕೆ ಗುಮಾಸ್ತರಿಗೆ ಸಂಬಳ ನೀಡಲು ಸರ್ಕಾರದಲ್ಲಿ ಹಣವಿಲ್ಲ

ರಾಯಚೂರು(ದೇವದುರ್ಗ): ಬೆಂಗಳೂರಿನ ಪಾಲಿಕೆಯ ಗುಮಾಸ್ತರಿಗೆ ಸಂಬಳ ನೀಡಲು ಹಣವಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಪರೋಕ್ಷವಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಟೀಕಿಸಿದರು.
ಪಟ್ಟಣದ ಬಸವ ಕಾಲೇಜು ಆವರಣದಲ್ಲಿ ನಡೆದ ಜೆಡಿಎಸ್ ಪಕ್ಷದಿಂದ ಜನರೊಂದಿಗೆ ಜನತಾದಳ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಶಾಸಕರಿಗೆ ಅನುದಾನ ನೀಡುತ್ತಿಲ್ಲ ಎಂಬುವುದನ್ನು ಕಾಂಗ್ರೆಸ್ ನೇತೃತ್ವದ ಸ್ವಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಯವರ ಮನೆತನದ ಪಕ್ಷವನ್ನು ಇದು ಕಾರ್ಯಕರ್ತರ ಪಕ್ಷವಾಗಿದೆ. ಕಾರ್ಯಕರ್ತರು ಪಕ್ಷವನ್ನು ಉಳಿಸಿ ಬೆಳಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನನಗೆ 93 ವರ್ಷ ವಯಸ್ಸಾಗಿದ್ದರೂ ಇಲ್ಲಿಗೆ ಬಂದಿರುವುದು ನನ್ನ ಪುತ್ಥಳಿ ಉದ್ಘಾಟನೆಗೆ ಅಲ್ಲ. ಬದಲಾಗಿ ನಿಮ್ಮನ್ನು ನೋಡಲು ಬಂದಿರುವುದೇ ಮುಖ್ಯ ಕಾರಣವಾಗಿದೆ. ಇದರಿಂದ ನನಗೆ ಸಂತೋಷ ತಂದಿದೆ. ನಾನೊಬ್ಬ ಸಾಮಾನ್ಯ ರಾಜಕಾರಣಿ. ನಾನು ಎಂದಿಗೂ ದೊಡ್ಡ ವ್ಯಕ್ತಿ ಎಂದು ಹೇಳಿಕೊಳ್ಳುವುದಿಲ್ಲ, ಉತ್ಪ್ರೇಕ್ಷೆ ಮಾತುಗಳನ್ನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.