ಪಾಕ್ ಪರ ಬಿಡಿಎಸ್ ವಿದ್ಯಾರ್ಥಿನಿ ಪೋಸ್ಟ್: ನಂತರ ಯೂ ಟರ್ನ್

ವಿಜಯಪುರ: ನಗರದ ಅಲ್-ಅಮೀನ್ ಮೆಡಿಕಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಪರ ಹಾಗೂ ದೇಶ ವಿರೋಧಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಕ್ರಮದ ಒತ್ತಡ ಹೆಚ್ಚುತ್ತಿದ್ದಂತೆ ವಿದ್ಯಾರ್ಥಿನಿ ಯೂಟರ್ನ್ ಹೊಡೆದಿದ್ದಾಳೆ.
ದಂತ ವೈದ್ಯಕೀಯ ವಿದ್ಯಾರ್ಥಿನಿ ತಷಾವುದ್ದ ಫಾರೂಖಿ ಶೇಖ್ ಎಂಬುವವಳು ‘@hoodyyyyyyy’ ಎಂಬ ಹೆಸರಿನಲ್ಲಿ, ನನ್ನ ಪಾಕಿಸ್ತಾನಿ ಸ್ನೇಹಿತರಿಗೆ, ಐಒಜೆಕೆ, ಎಜೆಕೆ ಜನರು ಸರ್ಕಾರಿ ಮಿಲಿಟರಿ ಸ್ಥಳಗಳಿಗೆ ಹೋಗಬೇಡಿ. ಗಡಿಯಿಂದ ೨೦೦ ಕಿಮೀ ವ್ಯಾಪ್ತಿಗೆ ಹೋಗಬೇಡಿ, ಅಲ್ಲಾ ಪಾಕಿಸ್ತಾನ ಹಾಗೂ ನಮ್ಮೆಲ್ಲರನ್ನು ಭಾರತದಿಂದ ರಕ್ಷಿಸಲಿ ಅಮೀನ್… ಎಂದು ದೇಶ ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾಳೆ. ತನ್ನ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಕೂಡ ಪೋಸ್ಟ್ ಹಾಕಿದ್ದಾಳೆ. ವಿದ್ಯಾರ್ಥಿನಿ ತಷಾವುದ್ದ ಫಾರೂಖಿ ಶೇಖ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ವಿದ್ಯಾರ್ಥಿನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ. ಬಳಿಕ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ವಿನೋದ ದೊಡಮನಿ ಅವರು ಸ್ವಯಂ ಪ್ರೇರಿತ ದೂರನ್ನು ದಾಖಲಿಸಿದ್ದಾರೆ. ಪಾಕ್ ಪರ ಹಾಗೂ ಭಾರತ ದೇಶದ ಸಾರ್ವಭೌಮತ್ವದ ಘನತೆಗೆ ಅಪಾಯಕಾರಿ ರೀತಿಯಲ್ಲಿ ಪೋಸ್ಟ್ ಹಾಕಿದ್ದಕ್ಕೆ ವಿದ್ಯಾರ್ಥಿನಿ ವಿರುದ್ಧ ಬಿಎನ್‌ಎಸ್ ೧೫೨, ೧೯೭.೩ (೫) ಅಡಿ ಪ್ರಕರಣ ದಾಖಲಾಗಿದೆ.
ದೂರು ದಾಖಲಾಗುತ್ತಿದ್ದಂತೆ ವಿದ್ಯಾರ್ಥಿನಿ ತಷಾವುದ್ದ ಯೂ ಟರ್ನ್ ಹೊಡೆದಿದ್ದು, ನನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿನ ನನ್ನ ಕಾಮೆಂಟ್ ಕೆಲವರನ್ನು ನೋಯಿಸಿದೆ. ಮನನೊಂದಿರುವ ಎಲ್ಲರಿಗೂ ನನ್ನ ಹೃದಯದಿಂದ ಕ್ಷಮೆಯಾಚಿಸುತ್ತೇನೆ. ಭಾರತೀಯಳಾದ ನಾನು ನನ್ನ ರಾಷ್ಟ್ರವನ್ನು ಪ್ರೀತಿಸುತ್ತೇನೆ. ಇದು ನನ್ನ ತಾಯ್ನಾಡು, ಭಾರತದಲ್ಲಿ ಹುಟ್ಟಿ ಬೆಳೆದದ್ದು. ನಾನು ಕಮೆಂಟ್ ಮಾಡಿದ್ದು ಮೂರ್ಖತನದ ಕೃತ್ಯವಾಗಿದೆ. ಮುಂದೆ ನಾನು ಎಂದಿಗೂ ಈ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಖಚಿತಪಡಿಸುತ್ತೇನೆ. ಜೈ ಹಿಂದ್ ಎಂದು ಪೋಸ್ಟ್ ಮಾಡಿದ್ದಾಳೆ.