ಪರಿಶಿಷ್ಟ ಸಮುದಾಯದವರು ಜಾತಿ ಹೆಸರು ಬದಲಿಸಲು ಅವಕಾಶ

ಸಂ.ಕ ಸಮಾಚಾರ, ಕೋಲಾರ: ಪರಿಶಿಷ್ಟ ಸಮುದಾಯಗಳವರು ಇದೀಗ ನಡೆಯುತ್ತಿರುವ ಸಮೀಕ್ಷೆಯಲ್ಲಿ ತಮ್ಮ ಜಾತಿಯ ಹೆಸರನ್ನು ಸ್ಪಷ್ಟವಾಗಿ ನಮೂದಿಸಬೇಕು. ಆಯಾ ಸಮುದಾಯಗಳು ಸ್ವಇಚ್ಚೆಯಿಂದ ಜಾತಿಯ ಹೆಸರು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಒಳ ಮೀಸಲಾತಿ ಕುರಿತು ಸರ್ಕಾರದ ಸಲಹಾ ಸಮಿತಿ ಅಧ್ಯಕ್ಷ ಹೆಚ್.ಎನ್.ನಾಗಮೋಹನದಾಸ್ ತಿಳಿಸಿದರು.

ಮಂಗಳವಾರ ನಗರದಲ್ಲಿ ಪರಿಶಿಷ್ಟ ಸಮುದಾಯದ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯ, ನಗರ, ವೃತ್ತಗಳು ಸೇರಿದಂತೆ ಹೆಸರುಗಳನ್ನು ನಾವು ಬದಲಾಯಿಸಿಕೊಳ್ಳುತ್ತೇವೆ. ಅದೇ ರೀತಿ ಯಾವುದೋ ಶತಮಾನದಲ್ಲಿ ನೀಡಿರುವಂತಹ ಜಾತಿಗಳಿಂದ ಸಮುದಾಯಗಳು ಅವಮಾನ ಸಹಿಸಿಕೊಳ್ಳುತ್ತಿವೆ. ಹಾಗಾಗಿ ತಾವು ಯಾವ ಸಮುದಾಯಕ್ಕೆ ಸೇರಿದ್ದಾರೆ ಎಂದು ತಿಳಿಯಲು ಈ ಸಮೀಕ್ಷೆ ಸಹಕಾರಿಯಾಗಿದೆ ಎಂದು ವಿವರಿಸಿದರು.

ಸಮುದಾಯಗಳು ಜಾತಿ ಹೆಸರನ್ನು ಸ್ಪಷ್ಟಪಡಿಸಬೇಕು. ಇದರಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಲು ಸಾಧ್ಯವಾಗಲಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್ ಮಾತನಾಡಿ, ಪರಿಶಿಷ್ಟ ಸಮುದಾಯಗಳ ಜಾತಿ ಸಮೀಕ್ಷೆಯಲ್ಲಿ 42 ಪ್ರಶ್ನೆಗಳನ್ನು ನಮೂದು ಮಾಡಲಾಗಿದೆ. ಆಯೋಗದ ಮೂಲಕ ಅನುಮೋದಿಸಿ ಪರಿಶಿಷ್ಟ ಜಾತಿಯ ಸಾಮಾಜಿಕ, ಆರ್ಥಿಕ ಸ್ಥಿತಿಗಳ ಬೆಳವಣಿಗೆಯನ್ನು ಸಮಗ್ರವಾಗಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.

2011 ರ ಗಣತಿಯಲ್ಲಿ ಶೇಕಡ 43 ರಷ್ಟು ಜನ ಆದಿಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದ್ದಾರೆ. ಅದೇ ರೀತಿ ಸ್ಪಷ್ಟವಾಗಿ ಪ್ರತ್ಯೇಕವಾಗಿ ಉಪ ಜಾತಿ ಹೆಸರನ್ನು ನಮೂದಿಸಲು ಆಪ್ ಸಿದ್ದಪಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಸಮನ್ವಯ ಸದಸ್ಯ ಕಾಂತರಾಜ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸಿಇಒ ಡಾ.ಪ್ರವೀಣ್, ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಉಪಸ್ಥಿತರಿದ್ದರು.