ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ: ಕೇಳಿ ಬಂತು ಗಂಭೀರ ಆರೋಪ

ಬೆಂಗಳೂರು: ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನಡೆಸುತ್ತಿರುವ ಸಮೀಕ್ಷೆ ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಮನೆಗಳಲ್ಲಿ ಸಮೀಕ್ಷೆ ನಡೆಸದೇ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಸ್ಟಿಕ್ಕರ್ ಅಂಟಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಈಗ ಸಮೀಕ್ಷೆ ನಡೆಸದೇ ಮನೆಗೆ ಸ್ಟಿಕ್ಕರ್ ಅಂಟಿಸಿದ್ದನ್ನು ಪ್ರಶ್ನಿಸಿದ ಮನೆಯ ಮಾಲೀಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಚಿಕ್ಕಲಸಂದ್ರ ಬಡಾವಣೆಯ ಸಾರ್ವಭೌಮ ನಗರದ 7ನೇ ಕ್ರಾಸ್‌ನಲ್ಲಿ ನಡೆದಿದೆ.

ಮನೆಗೆ ಸ್ಟಿಕ್ಕರ್ ಅಂಟಿಸಿದ್ದನ್ನು ಪ್ರಶ್ನಿಸಿದ ಮಾಲೀಕ ನಂದೀಶ್ ಮೇಲೆ ಬಿಬಿಎಂಪಿ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಬುಧವಾರ ಪೌರ ಕಾರ್ಮಿಕರು ನಗರದಲ್ಲಿ ಮನೆಗಳಿಗೆ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ, ಸಮೀಕ್ಷೆಯನ್ನು ಮಾಡಿಲ್ಲ ಎಂದು ಆರೋಪಿಸಲಾಗಿತ್ತು.

ನಾವು ಮನೆಯಲ್ಲಿಯೇ ಇದ್ದೆವು. ಸಮೀಕ್ಷೆಯನ್ನು ಮಾಡದೆ ಸ್ಟಿಕ್ಕರ್ ಅಂಟಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ವಾಪಸ್ ತೆರಳಿದರು. ಒಂದು ಗಂಟೆಯ ಬಳಿಕ ಮೇಲ್ವಿಚಾರಕರ ಜೊತೆ ಬಂದು ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಆದರೆ ಸಿಬ್ಬಂದಿಗಳು ಯಾರೂ ಸಹ ಐಡಿ ಕಾರ್ಡ್‌ ಧರಿಸಿರಲಿಲ್ಲ ಎಂದು ಮನೆಯವರು ಹೇಳಿದ್ದಾರೆ.

ಈ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದಾಗ ಸಿಬ್ಬಂದಿ ಬಂದು ಕ್ಷಮೆ ಕೇಳಿದ್ದಾರೆ. ಸ್ಟಿಕ್ಕರ್ ಅಂಟಿಸುವುದು ನಮಗೆ ಕೊಟ್ಟಿರುವ ಟಾಸ್ಕ್ ಎಂದು ಸಿಬ್ಬಂದಿ ಹೇಳಿದ್ದಾರೆ. ಆದರೆ ಈ ಘಟನೆ ಕುರಿತು ಯಾವುದೇ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ.

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ನಿವೃತ್ತ ನ್ಯಾ. ಎಚ್. ಎನ್. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗದವನ್ನು ರಚನೆ ಮಾಡಲಾಗಿದೆ. ಈ ಆಯೋಗದ ಮಧ್ಯಂತರ ವರದಿಯ ಶಿಫಾರಸಿನ ಅನ್ವಯವೇ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯನ್ನು ನಡೆಸಲಾಗುತ್ತಿದೆ.

ಸಮೀಕ್ಷೆ ಕಾಟಾಚಾರಕ್ಕೆ ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಗಳು ನಡೆದಿವೆ. ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿಯೂ ಮನೆಗೆ ಬಂದು ಸಮೀಕ್ಷೆ ನಡೆಸದೇ ಸ್ಟಿಕ್ಕರ್ ಅಂಟಿಸಲಾಗುತ್ತಿದೆ ಎಂದು ಜನರು ಆರೋಪವನ್ನು ಮಾಡುತ್ತಿದ್ದಾರೆ.

ಬುಧವಾರ ನಂದಿಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆ ಮನೆ ಜಾತಿ ಸಮೀಕ್ಷೆಯಲ್ಲಿ ತೊಂದರೆಗಳಾಗಿದ್ದರೆ ಆನ್‌ಲೈನ್‌ನಲ್ಲಿ ದಾಖಲು ಮಾಡಲು ತೊಂದರೆಯಿಲ್ಲ. ಯಾವುದಾದರೂ ಒಂದು ದಾರಿಯಲ್ಲಿ ಜಾತಿ ಹೇಳಿಕೊಳ್ಳಬೇಕು ಎಂದು ಹೇಳಿದ್ದರು.

ಸಮೀಕ್ಷೆ ಮಾಡುವವರು ಮನೆಗೆ ಬಂದಾಗ ಅಥವಾ ಶಿಬಿರದಲ್ಲಿ ಅಥವಾ ಆನ್‌ಲೈನ್ ಹೀಗೆ ಯಾವುದಾದರೂ ಒಂದು ವಿಧಾನದಲ್ಲಿ ಪರಿಶಿಷ್ಟ ಜಾತಿಯವರು ತಮ್ಮ ಜಾತಿಯ ಬಗ್ಗೆ ಮಾಹಿತಿ ನೀಡಬೇಕು. ಸಮೀಕ್ಷೆ ಮಾಡುವವರು ಮನೆ ಮನೆಗೆ ತೆರಳುತ್ತಿದ್ದಾರೆ.ಬೆಂಗಳೂರು ನಗರದಲ್ಲಿ ಕೆಲವರು ಜಾತಿ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಲು ಕೀಳರಿಮೆ ಇದ್ದರೆ ಅಂಥವರು ಆನ್‌ಲೈನ್‌ನಲ್ಲಿ ಜಾತಿಯ ಹೆಸರನ್ನು ದಾಖಲಿಸಬಹುದು ಎಂದು ತಿಳಿಸಿದ್ದರು.