ಗದಗ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಲು ಕಾಂಗ್ರೆಸ್ ನಾಯಕರುಗಳ ಕೈವಾಡವಿದೆಯೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೊಸ ಬಾಂಬ್ ಹಾಕಿದ್ದಾರೆ.
ಗದುಗಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಒಂದು ಗುಂಪು ಇಡಿ ಅಧಿಕಾರಿಗಳಿಗೆ ದೂರು ನೀಡಿದೆ. ಇದರಿಂದಾಗಿ ಇಡಿ ಅಧಿಕಾರಿಗಳು ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ನಾಯಕರುಗಳು ಕಾರಣವಲ್ಲವೆಂದು ಸ್ಪಷ್ಟಪಡಿಸಿದರು.
2013ರಲ್ಲಿ ಡಾ.ಜಿ. ಪರಮೇಶ್ವರ್‌ರನ್ನು ಸೋಲಿಸಿದ್ದು ಯಾರು? ಎಂದು ಪ್ರಶ್ನಿಸಿದ ಪ್ರಲ್ಹಾದ ಜೋಶಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪರಮೇಶ್ವರ ಸೋಲಿಗೆ ಕಾರಣರಾಗಿದ್ದರೆಂದು ಟೀಕಿಸಿದರು.
ಚಿನ್ನ ಕಳ್ಳತನ ಸೇರಿ ಎಲ್ಲಾ ಪ್ರಕರಣಗಳ ಬಗ್ಗೆ ತನಿಖೆ ಮಾಡುವಂತೆ ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದು ಯಾರು? ಇಡಿ ಅಧಿಕಾರಿಗಳಿಗೆ ಯಾರು ದೂರು ನೀಡಿದ್ದಾರೆಂಬುದು ಸಿಎಂ ಸಿದ್ದರಾಮಯ್ಯಗೂ ಗೊತ್ತಿದೆ. ಮಾಹಿತಿ ಸಿಕ್ಕಾಗ ಇಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ. ಯಾರೇ ತಪ್ಪು ಮಾಡಿದರೂ ಕಾನೂನು ಕ್ರಮ ಆಗಲಿದೆ. ಏನಾಗಿದೆ ಅನ್ನೋದನ್ನು ಇಡಿ ಅಧಿಕಾರಿಗಳು ಹುಡುಕುತ್ತಿದ್ದಾರೆ ಎಂದರು.
ಗೃಹ ಸಚಿವ ಜಿ. ಪರಮೇಶ್ವರ ಮೇಲೆ ನಮಗೆ ಗೌರವವಿದೆ. ಅವರು ಓರ್ವ ಸಭ್ಯ ರಾಜಕಾರಣಿ ಆಗಿದ್ದಾರೆಂದು ಹೇಳುವ ಮೂಲಕ ಪ್ರಲ್ಹಾದ ಜೋಶಿ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.