ಸಂ.ಕ. ಸಮಾಚಾರ ಚಿತ್ತಾಪುರ(ಕಲಬುರಗಿ) ತನ್ನ ಪ್ರಿಯಕರನ ಜೊತೆ ಸೇರಿಕೊಂಡು ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಬಾಗೋಡಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಭಾಗೋಡಿ ಗ್ರಾಮದ ನಿವಾಸಿ ಕುಪೇಂದ್ರ ತಂದೆ ಮಹಾದೇವ್ ನೀಲಕಂಠಿ (30), ಕೊಲೆಯಾದ ವ್ಯಕ್ತಿ. ಕಳೆದ ಏಳು ವರ್ಷಗಳ ಹಿಂದೆ ಶಾಂತಮ್ಮ ಎನ್ನುವ ಮಹಿಳೆ ಜೊತೆ ಕುಪೇಂದ್ರ ಮದುವೆಯಾಗಿದ್ದ. ಈ ಕುಟುಂಬಕ್ಕೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶಾಂತಮ್ಮ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದಳು ಎನ್ನಲಾಗಿದೆ. ತನ್ನ ಪ್ರಿಯಕನ ಜೊತೆ ಸೇರಿಕೊಂಡು ಗುರುವಾರ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಜಮೀನು ಮಾರಾಟ ಮಾಡಿರುವ ಹಣವನ್ನು ಗುರುವಾರ ಚಿತ್ತಾಪುರ ಪಟ್ಟಣದ ಎಸ್ ಬಿ ಐ ಬ್ಯಾಂಕ್ ನಲ್ಲಿ ಮೃತ ಕುಪೇಂದ್ರ ಹೆಂಡತಿ ಹಾಗೂ ಮಗಳ ಹೆಸರಿನಲ್ಲಿ ಡಿಪೋಸಿಟ್ ಮಾಡಿಸಿದ್ದಾನೆ ಎನ್ನುವುದು ಗೊತ್ತಾಗಿದೆ. ಕೊಲೆ ಮಾಡಿರುವ ಆರೋಪಿ ತಲೆಮರೆಸಿಕೊಂಡಿದ್ದು ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಯ ಪ್ರಮುಖ ಆರೋಪಿ ಶಾಂತಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ್ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.