ಉಗಾದಿ ಅಮವಾಸ್ಯೆ ದಿನ ಹೊಟ್ಟೆಪಕ್ಷದ ರಂಗಸ್ವಾಮಿ ಕನಸಿನಲ್ಲಿ ಬಂದು ನೀನು ಸುಮ್ಮನೇ ಬಿಡಬೇಡ… ಪಕ್ಷಕಟ್ಟು-ತವಡು ಕುಟ್ಟು ಎಂದು ಹೇಳಿದಂತೆ ಆದಾಗ ದಿಡಗ್ಗನೇ ಎದ್ದುಕುಳಿತು ಸುತ್ತಲೂ ಒಮ್ಮೆ ನೋಡಿ ಟೇಬಲ್ ಮೇಲೆ ಪ್ಲಾಸ್ಟಿಕ್ ಬಾಟಲಿಯಲ್ಲಿಟ್ಟಿದ್ದ ನೀರನ್ನು ಗಟಗಟ ಕುಡಿದು ಅಲಾ ಇವನ… ಇದೆಂತಹ ಕನಸು ಬಿತ್ತು… ಕನಸಿನಲ್ಲಿ ಬಂದು ಪಕ್ಷ ಕಟ್ಟು ಅಂತಿದಾನೆ ಅಂದರೆ ಇದರಲ್ಲಿ ಏನೋ ಅಡಗಿದೆ… ಎಂದು ಅಂದುಕೊಂಡು ಅದೇ ಯೋಚನೆಯಲ್ಲಿ ಮಲಗಿದ ಆದರೆ ನಿದ್ದೆಯೇ ಬರಲಿಲ್ಲ. ಎಷ್ಟೋ ಹೊತ್ತಿನ ನಂತರ ಮತ್ತೆ ಕನಸಿನಲ್ಲಿ ಡ್ರೆಸ್ ಬದಲಿ ಮಾಡಿಕೊಂಡು ತಲೆಯ ಮೇಲೊಂದು ಟೋಪಿ ಹಾಕಿಕೊಂಡು ಮತ್ತೆ ಕನಸಿನಲ್ಲಿ ಬಂದ ಹೊ.ಪ.ರ ಇಷ್ಟಗಲ ಬಾಯಿ ತೆಗೆದು ಮತ್ತೆ ಬಂದೆ ಎಂದು ಅಂದುಕೊಂಡೆಯಾ? ನಮ್ಮ ಕಾಲ ಬೇರೆ ಇತ್ತು. ಈಗಿನ ಕಾಲ ಬೇರೆ ಇದೆ. ಜನರೂ ಸಹ ಬೇರೆ ಆಗಿದ್ದಾರೆ. ಎದುರಿಗೆ ಭೇಟಿಯಾದಾಗ ನೀನೇ ಅನ್ನುತ್ತಾರೆ. ನೀನು ಮುಂದೆ ಹೋದರೆ ನಾನೂ ಅನ್ನುತ್ತಾರೆ. ಅದಕ್ಕಾಗಿ ಹೇಳುತ್ತಿದ್ದೇನೆ ನನ್ನ ಮಾತು ಕೇಳು… ಮಾತು ಕೇಳು ಎಂದು ಅಂದ ಹಾಗೆ ಆಯಿತು. ಮತ್ತೆ ಎದ್ದುಕುಳಿತ ಆತ ನಾನು ಪಕ್ಷ ಕಟ್ಟುವುದು ಈತನಿಗೆ ಹೇಗೆ ಗೊತ್ತಾಯಿತು? ಅದ್ಯಾರದ್ದೋ ಹಾರ ಹಾಕಿದ ಫೋಟೋದ ಮುಂದೆ ನಿಂತು ಮನಸ್ಸಿನಲ್ಲಿ ಬೇಡಿಕೊಂಡಿದ್ದು ಹೊಟ್ಟೆಪಕ್ಷದವರಿಗೆ ಹೇಗೆ ಗೊತ್ತಾಯಿತು? ಎಲ್ಲ ಫೆಲ್ಯೂರ್ ಅಂದುಕೊಂಡು ಮತ್ತೆ ಮಲಗಿದ. ಈ ಬಾರಿ ಏನೂ ಕನಸಿಗೆ ಬರಲಿಲ್ಲ.
ಮರುದಿನ ಮತ್ತೆ ಕನಸಿಗೆ ಬಂದು..ನಾನು ಹೇಳಿದಂಗೆ ಮಾಡಿಕೊಂಡು ಹೋಗು ಸಕ್ಸಸ್ ಆಗುತ್ತೀಯ… ಕಟ್ಟು ಪಕ್ಷ ಕಟ್ಟು-ಫುಲ್ ತವಡುಕುಟ್ಟು ಎಂದು ಎರಡು ಬಾರಿ ಹೇಳಿ ಅಲ್ಲಿಂದ ಸೊಂಯ್ಯನೇ ಮಾಯವಾದ ಈತ ಎದ್ದು ಎಷ್ಟೋ ಹೊತ್ತಿನವರೆಗೆ ಹಾಗೆಯೇ ಕುಳಿತಿದ್ದ.