ನ್ಯಾ.ವರ್ಮಾ ವಜಾಗೆ ಜಡ್ಜ್ ಸಮಿತಿ ಶಿಫಾರಸು

ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ ವರ್ಮಾ ನಿವಾಸದಲ್ಲಿ ಮಾರ್ಚ್ ೧೪ರ ರಾತ್ರಿ ಭಾರೀ ಪ್ರಮಾಣದ ನಗದು ಹಣ ಪತ್ತೆಯಾಗಿರುವುದು ತನಿಖೆ ವೇಳೆ ದೃಢಪಟ್ಟಿದ್ದರಿಂದ ಅವರನ್ನು ವಜಾಗೊಳಿಸಬೇಕೆಂದು ಮೂವರು ನ್ಯಾಯಾಧೀಶರ ಸಮಿತಿ ಶಿಫಾರಸು ಮಾಡಿದೆ.
ನ್ಯಾಯಮೂರ್ತಿ ವರ್ಮಾ ನವದೆಹಲಿಯ ೩೦ ತುಘಲಕ್ ರಸ್ತೆಯಲ್ಲಿ ಹೊಂದಿರುವ ಕ್ರಸೆಂಟ್ ಸ್ಟೋರ್ ರೂಮಿನಲ್ಲಿ ನಗದು ಹಣ ಪತ್ತೆಯಾಗಿರುವುದಕ್ಕೆ ಬಲವಾದ ಸಾಕ್ಷಾö್ಯಧಾರಗಳಿವೆ. ಮಾರ್ಚ್ ೧೫ರ ಮುಂಜಾವ ಈ ಸ್ಟೋರ್‌ರೂಮಿನಿಂದ ಸುಟ್ಟಹಣವನ್ನು ಹೊರಹಾಕಲಾಗಿದೆ ಎಂದು ಸಮಿತಿಯ ೬೪ ಪುಟಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಕಿ ನಂದಿಸುವ ಪ್ರಕ್ರಿಯೆಯಲ್ಲಿ ಕಂಡುಬಂದ ಮತ್ತು ಅರೆಸುಟ್ಟ ಕರೆನ್ಸಿ ನೋಟುಗಳು ಅತ್ಯಂತ ಅನುಮಾನಾಸ್ಪದ ವಸ್ತುಗಳಾಗಿವೆ. ನ್ಯಾಯಮೂರ್ತಿ ವರ್ಮಾ ಅವರ ಸಕ್ರಿಯ ಒಪ್ಪಿಗೆ ಇಲ್ಲದೆ ನೋಟುಗಳನ್ನು ಅವರ ಮನೆಯ ಔಟ್‌ಹೌಸ್‌ನ ಸ್ಟೋರ್ ರೂಮ್‌ನಲ್ಲಿಡುವುದು ಅಸಾಧ್ಯ ಎಂದೂ ಸಮಿತಿ ಅಭಿಪ್ರಾಯಕ್ಕೆ ಬಂದಿದೆ. ಸಮಿತಿ ವಿಚಾರಣೆ ನಡೆಸಿದ ಕನಿಷ್ಠ ೧೦ ಸಾಕ್ಷಿದಾರರು ಸುಟ್ಟ ಮತ್ತು ಅರೆಸುಟ್ಟ ನೋಟುಗಳನ್ನು ಕಣ್ಣಾರೆ ನೋಡಿದ್ದಾಗಿ ಒಪ್ಪಿಕೊಂಡಿದ್ದಾರೆ.