ಶಿವಮೊಗ್ಗ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನಕ್ಸಲ್ ಬಿ.ಜಿ. ಕೃಷ್ಣಮೂರ್ತಿ ಅವರನ್ನು ಬಾಡಿ ವಾರೆಂಟ್ ಮೇಲೆ ತ್ರಿಶೂಲ್ ಜೈಲಿನಿಂದ ಗುರುವಾರ ಕರೆತರಲಾಗಿತ್ತು.
ಆಗುಂಬೆಯ ಮೂರು ಪ್ರಕರಣದಲ್ಲಿ ಆರೋಪಿಯಾಗಿದ್ದ ಬಿ.ಜಿ. ಕೃಷ್ಣಮೂರ್ತಿಯವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಕೇಸ್ ದಾಖಲಾಗಿತ್ತು. 2009ರಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸ್ಫೋಟ, 2009ರಲ್ಲಿ ಅರುಣ್‌ಕುಮಾರ್ ಮನೆ ಮೇಲೆ ದಾಳಿ, 2007ರಲ್ಲಿ ಸುರೇಶ್ ನಾಯಕ ಬಂಧನದ ವೇಳೆ ನೆಕ್ಕಾಡು ಕಾಡಲ್ಲಿ ಸ್ಫೋಟಕ ವಸ್ತು ಪತ್ತೆ ಪ್ರಕರಣದಲ್ಲಿ ಬಿ.ಜಿ. ಕೃಷ್ಣ ಮೂರ್ತಿ ಆರೋಪಿಯಾಗಿದ್ದರು.
ಈ ಮೂರೂ ಪ್ರಕರಣದ ಸಾಕ್ಷಿಗಳ ವಿಚಾರಣೆ ಮುಗಿದಿದ್ದು, ಆರೋಪಿ ಹೇಳಿಕೆಗೆ ಇಂದು ಕರೆ ತರಲಾಗಿತ್ತು. ಈ ವೇಳೆ ನ್ಯಾಯಾಧೀಶರು ಸ್ಫೋಟಕ ಹಾಗೂ ಗನ್‌ಗಳ ಬಳಕೆ ಕುರಿತು ಪ್ರಶ್ನಿಸಿದ್ದಾರೆ. ಇವುಗಳನ್ನು ಬಿ.ಜಿ. ಕೃಷ್ಣಮೂರ್ತಿ ಅಲ್ಲಗೆಳೆದಿದ್ದಾರೆ.
ಜೈಲಿನಲ್ಲಿ ಕನ್ನಡ ಪುಸ್ತಕ ಓದಲು ಕೋರ್ಟ್‌ನ ಅನುಮತಿ ಕೇಳಲಾಯಿತು. ವಕೀಲ ಶ್ರೀಪಾಲರಿಂದ ಈ ಬಗ್ಗೆ ಕೋರಿಕೆ ಮಂಡಿಸಲಾಯಿತು. ಭದ್ರತಾ ವಿಚಾರದಲ್ಲಿ ಜೈಲಿನವರು ಬೇಡ ಎಂಬ ವಾದವನ್ನು ಎಪಿಪಿ ಮಂಡಿಸಿದರೂ ಕೊನೆಯಲ್ಲಿ ಪುಸ್ತಕಗಳ ಓದುವಿಕೆಗೆ ಅವಕಾಶ ನೀಡಲಾಯಿತು.
ನಂತರ ಮಾತನಾಡಿದ ವಕೀಲ ಶ್ರೀಪಾಲ್ ಮುಂದಿನ ತಿಂಗಳು 16ಕ್ಕೆ ವಾದ ಇದೆ. ಗುರುವಾರ ಶಿವಮೊಗ್ಗದ ಜೈಲಿನಲ್ಲಿ ವಸತಿ ವ್ಯವಸ್ಥೆ ಇದ್ದು, ಬೆಳಿಗ್ಗೆ ತ್ರಿಶೂರ್‌ಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದರು. ಕೋರ್ಟ್ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.