ಬೆಂಗಳೂರು: ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಪರೀಕ್ಷಾರ್ಥಿಗಳ ಬಂಧನ ಮಾಡಿದ್ದು ಅವರನ್ನು ಕೂಡಲೇ ಸರ್ಕಾರ ಬಂಧಮುಕ್ತಗೊಳಿಸಬೇಕೆಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ KAS ಮರುಪರೀಕ್ಷೆಗೆ ಆಗ್ರಹಿಸಿ ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡ ಪರೀಕ್ಷಾರ್ಥಿಗಳನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ. ಕಲ್ಬುರ್ಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾಕಿದ ದೇಶ ದ್ರೋಹಿಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದರೋ ಗೊತ್ತಿಲ್ಲ; ಆದರೆ ತಮಗಾದ ಅನ್ಯಾಯವನ್ನು ಶಾಂತಿಯುತವಾಗಿ ಪ್ರತಿಭಟಿಸಿ ಧಾರವಾಡದಿಂದ ಪಾದಯಾತ್ರೆ ಮೂಲಕ ಪಾಲ್ಗೊಂಡಿದ್ದ ಪರೀಕ್ಷಾರ್ಥಿಗಳ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತಾತ್ಮಕ ವೈಫಲ್ಯ, ಪರೀಕ್ಷಾ ನಿಯಂತ್ರಕರ ಸಾಲು ಸಾಲು ತಪ್ಪುಗಳ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ? ಸರ್ಕಾರದ ವೈಫಲ್ಯವನ್ನು ಬಯಲಿಗೆಳೆಯುತ್ತಿರುವ ಪರೀಕ್ಷಾರ್ಥಿಗಳನ್ನು ಏಕೆ ಅರೆಸ್ಟ್ ಮಾಡಲಾಯಿತು? ‘ಕೈ’ ಲಾಗದ ಸರ್ಕಾರ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನ್ನು ಬಿಡುತ್ತಿದೆ.
ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವರನ್ನು ಕೂಡಲೇ ಸರ್ಕಾರ ಬಂಧಮುಕ್ತಗೊಳಿಸಿ, ತಮ್ಮ ಪರಾಕ್ರಮ, ಪೌರುಷಗಳನ್ನು ಆಯೋಗವನ್ನು ಭ್ರಷ್ಟಮುಕ್ತ ಮಾಡುವಲ್ಲಿ, ಪರೀಕ್ಷಾರ್ಥಿ ಸ್ನೇಹಿ ಮಾಡುವಲ್ಲಿ ವಿನಿಯೋಗಿಸಲಿ ಎಂದಿದ್ದಾರೆ.