ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶವಗಳು ಪತ್ತೆ

ಶ್ರೀರಂಗಪಟ್ಟಣ: ನೇಣು ಬಿಗಿದ ಸ್ಥಿತಿಯಲ್ಲಿ ಪುರುಷ ಹಾಗೂ ಮಹಿಳೆಯ ಕೊಳೆತ ಶವಗಳು ತಾಲೂಕಿನ ಕೆ.ಆರ್.ಎಸ್–ಬೆಳಗೊಳ ರಸ್ತೆಯ ಬೆಳಗೊಳ ಗ್ರಾಮದ ಈದ್ಗಾ ಮೈದಾನದಲ್ಲಿ ಕಂಡು ಬಂದಿವೆ.
ಗ್ರಾಮದ ರಾಚಯ್ಯ ಎಂಬುವರ ಜಮೀನಿನಲ್ಲಿನ ಮಹಿಳೆ ಮತ್ತು ಪುರುಷ ಎರಡು ಶವಗಳು ಪತ್ಯೇಕವಾಗಿ ಮರಕ್ಕೆ ಪ್ಲಾಸ್ಟಿಕ್ ದಾರದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜಮೀನಿನ ಮಾಲೀಕ ಜೆ.ಸಿ.ಬಿ ಮೂಲಕ ಕೆಲಸ ಮಾಡುತ್ತಿದ್ದ ವೇಳೆ ಈ ಇಬ್ಬರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿವೆ.
ದೇಹಗಳು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದ್ದು, ಸ್ಥಳಕ್ಕೆ ಕೆ.ಆರ್.ಸಾಗರ ಪಿ.ಎಸ್.ಐ ರಮೇಶ ಕರ್ಕಿಕಟ್ಟೆ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಂಡ್ಯ ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಮತ್ತು ಡಿ.ವೈ.ಎಸ್.ಪಿ ಶಾಂತಮಲ್ಲಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾಹಿತಿ ಪಡೆದಿದ್ದಾರೆ.
ಸುಮಾರು 5 ಅಡಿ ಎತ್ತರ, ಬಿಳಿ ತಲೆಗೂದಲು, ನೇರಳೆ ಕೆಂಪು ಸೀರೆ ಇರುವ 60 ರಿಂದ 65 ವರ್ಷ ಮಹಿಳೆ ಮತ್ತು ಬಿಳಿ ತಲೆಗೂದಲು, ಬಿಳಿ ಕುರುಚಲು ಗಡ್ಡ ಹೊಂದಿರು, ತಿಳಿ ಹಸಿರು ಬಣ್ಣದ ಟೀ ಶರ್ಟ್, ಬೆಲ್ಟ್ ಹಾಕಿರುವ ನೀಲಿ ಬಣ್ಣದ ಪ್ಯಾಂಟ್ 5.3 ಅಡಿ ಎತ್ತರ, 65 ರಿಂದ 70 ವರ್ಷದ ಪುರಷ ಇಬ್ಬರು ಪತ್ಯೇಕವಾಗಿ ಮರಕ್ಕೆ ಪ್ಲಾಸ್ಟಿಕ ದಾರದಿಂದ ನೇಣು ಬಿಗಿದುಕೊಂಡಿದ್ದಾರೆ.
ಇಬ್ಬರು ಸುಮಾರು 20 ರಿಂದ 25 ದಿನಗಳ ಹಿಂದೆಯೇ ಸಾವನಪ್ಪಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಮೈಸೂರು ಕೆ.ಆ‌ರ್. ಆಸ್ಪತ್ರೆ ಶವಗಾರದಲ್ಲಿ ಶವ ಪರೀಕ್ಷೆ ನಡೆಸಿ ಸಮೀಪದ ರುದ್ರಭೂಮಿಯಲ್ಲಿ ಕಾನೂನು ರೀತ್ಯಾ ಅಂತ್ಯಕ್ರಿಯೆ ನಡೆಸಲಾಗಿದೆ.