ನೀವೂ ತಿಳಿಯಿರಿ-ಅವರಿಗೂ ತಿಳಿಸಿಬಿಡಿ

ಡಿಯರ್ ಸಾಹೇಬ್ರೆ… ನೀವು ಹಾಗೂ ಆ ಎಲ್‌ಎನ್‌ಟಿ ಸುಬ್ಬಣ್ಣ ಇಬ್ಬರೂ ಸೇರಿ ವಾರದಲ್ಲಿ ೭೦ ಗಂಟೆ ಕೆಲಸ ಮಾಡಿ.. ೯೦ ಗಂಟೆ ಕೆಲಸ ಮಾಡಿ ಎಂದು ಮೈಕ್ ಮುಂದೆ ಹೇಳುತ್ತಿದ್ದೀರಿ. ನಾನು ಹಾಗೂ ನನ್ನ ಹಾಗೆ ಕೋಟ್ಯಂತರ ಜನರೂ ಕೇಳಿಸಿಕೊಂಡಿದ್ದಾರೆ. ಅವರೆಲ್ಲಿ ಕೆಲವರು ಅವರಿವರ ಮುಂದೆ ಆಡಿಕೊಳ್ಳುತ್ತಿದ್ದಾರೆ, ಇನ್ನುಳಿದವರು ಸುಮ್ಮನಿದ್ದಾರೆ ನಾನು ಮಾತ್ರ ಡೈರೆಕ್ಟಾಗಿ ನಿಮಗೆ ಪತ್ರ ಬರೆಯುತ್ತಿರುವೆ ದಯವಿಟ್ಟು ಇದನ್ನು ಎರಡೆರಡು ಸಲ ಓದಿ ಒಪ್ಪಿಸಿಕೊಳ್ಳಿ. ಸಾಹೇಬ್ರೆ ನೀವು ವಾರದಲ್ಲಿ ಎಪ್ಪತ್ತೆಂಟು ಗಂಟೆ ಕೆಲಸ ಮಾಡಿ ಅನ್ನುತ್ತೀರಿ ಆ ಎಲ್‌ಎನ್‌ಟಿ ಸುಬ್ಬಣ್ಣ ಸಾಹೇಬ್ರು… ಹೆಂಡತಿ ಮುಖ ನೋಡಿಕೊಂಡು ಕುಳಿತಿರುವುದು ಸಾಕು ೯೦ ತಾಸು ಕೆಲಸ ಮಾಡಿ ಅನ್ನುತ್ತಾರೆ… ನಾವು ಮಾಡುವ ಕೆಲಸ ನಿಮಗೆ ಗೊತ್ತಿಲ್ಲ ಎಂದು ಅನಿಸುತ್ತದೆ. ನಾನು ಪ್ರತಿದಿನ ಮುಂಜಾನೆ ಏಳು ಏಳೂವರೆಗೆ ಎದ್ದೆನೆಂದರೆ ಒಂಭತ್ತುವರೆಗೆ ಎಲ್ಲ ರೆಡಿ ಆಗಿಬಿಡುತ್ತೇನೆ(ಕಚೇರಿಗೆ ಹೋಗಿ ಕೆಲಸ ಮಾಡುವುದು ಇರುತ್ತದಲ್ಲ) ಅಲ್ಲಿಗೆ ಎರಡೂವರೆ ತಾಸು ಆಗುತ್ತದೆ. ನಂತರ ನಮ್ಮ ಮನೆಯಿಂದ ಕಚೇರಿಗೆ ಬರಲು ೪೫ ನಿಮಿಷ ಟ್ರಾಫಿಕ್ ಇದ್ದರೆ ಒಂದು ಗಂಟೆ. ಅಲ್ಲಿಗೆ ಟೋಟಲ್ ಮೂರುವರೆ ತಾಸು. ಕಚೇರಿಗೆ ಬಂದು ಎಲ್ಲರೊಂದಿಗೆ ಮಾತನಾಡಿ ಕೆಲಸ ಶುರುಮಾಡುವಷ್ಟರಲ್ಲಿ ಒಂದೂವರೆ ತಾಸು ಅಲ್ಲಿಗೆ ಟೋಟಲ್ ಐದು ತಾಸು. ಆಮೇಲೆ ಒಂದು ಕಪ್ ಚಹ ಕುಡಿದುಬಂದು ೧೨ ರಿಂದ ಎರಡೂವರೆ ವರೆಗೆ ಕೆಲಸ ಮಾಡುತ್ತೇವೆ. ಟೋಟಲ್ ಏಳೂವರೆ ತಾಸು. ಆಮೇಲೆ ಊಟಕ್ಕೆ ಬರೋಬ್ಬರಿ ಒಂದು ತಾಸು (ಕಚೇರಿಯಲ್ಲಿಯೇ ಊಟ ಮಾಡುತ್ತೇವೆಯಾದ್ದರಿಂದ ಅದೂ ಕೆಲಸದ ಸಮಯವೇ) ಅಲ್ಲಿಗೆ ಎಂಟೂವರೆ ತಾಸು..ಓಕೆ? ಮೂರುವರೆಯಿಂದ ಐದೂವರೆವರೆಗೆ ಅಲ್ಲಿಗೆ ಮೂರು ತಾಸು ಒಟ್ಟು ಹನ್ನೊಂದುವರೆ ತಾಸು. ಸಂಜೆ ಸಮಯ ಟ್ರಾಫಿಕ್ ಹೆಚ್ಚು ಇರುತ್ತದೆ. ಮಾರುಕಟ್ಟೆಗೆ ಹೋಗಿ ತರಕಾರಿ, ಮನೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಇರುತ್ತದೆ. (ಇದೂ ಸಹ ಕಚೇರಿ ಕೆಲಸದಲ್ಲಿಯೇ ಕೌಂಟ್ ಆಗುತ್ತದೆ) ಇದಿಷ್ಟು ಮಾಡುವುದರಲ್ಲಿ ಸುಮಾರು ಎರಡೂವರೆ ತಾಸು ಆಗುತ್ತದೆ ಅಲ್ಲಿಗೆ ದಿನದಲ್ಲಿ ಒಟ್ಟು ೧೪ ಗಂಟೆ ಕೆಲಸವಾಗುತ್ತದೆ ಎಲ್ಲ ಸೇರಿಸಿದರೆ ಸಂಡೇ ಹೊರತುಪಡಿಸಿ ವಾರಕ್ಕೆ ೯೨ ಗಂಟೆಗಳು ಆಗುತ್ತವೆ. ಇಷ್ಟೇ ನಾನು ಹೇಳುವುದಿತ್ತು. ನೀವೂ ತಿಳಿಯಿರಿ ಎಲ್‌ಎನ್‌ಟಿ ಸುಬ್ಬಣ್ಣನಿಗೂ ತಿಳಿಸಿಬಿಡಿ,
ಇಂತಿ ನಿಮ್ಮ ತಿಗಡೇಸಿ