ಜೀವನರಹಸ್ಯವು ಯಾದೃಚ್ಛಿಕ ಘಟನೆಗಳ ಅಭಿವ್ಯಕ್ತಿಯಲ್ಲ. ಆದರೆ ಎಲ್ಲೆಡೆ ಅಸ್ತಿತ್ವದಲ್ಲಿರುವ ಒಂದು ದೈವಿಕ ಬುದ್ಧಿವಂತಿಕೆಯ ಅಭಿವ್ಯಕ್ತಿಯಾಗಿದೆ. ಅಂತಹ ಬುದ್ಧಿವಂತಿಕೆಯು ನಂಬಲರ್ಹವೇ ಅಥವಾ ಯಾದೃಚ್ಛಿಕ ಘಟನೆಗಳು ಮತ್ತು ಆಕಸ್ಮಿಕ ಕಾರಣಗಳನ್ನು ನಂಬುವುದನ್ನು ಮುಂದುವರಿಸಬೇಕೇ ಎಂಬುದನ್ನು ಈ ಕೆಲವೊಂದು ಪ್ರಾಕೃತಿಕ ವಿದ್ಯಮಾನಗಳನ್ನು ಗಮನಿಸಿ ನಿರ್ಧರಿಸಿ: ಸಾಗರದಂಚಿನ ಕಂದರಗಳಲ್ಲಿ ವಾಸಿಸುವ ಮರುಭೂಮಿ ಪಕ್ಷಿಗಳು ಕಣಿವೆಯ ಅಂಚಿನ ಉದ್ದಕ್ಕೂ ವ್ಯಾಪಕವಾಗಿ ಚದುರಿದ ಸ್ಥಳಗಳಲ್ಲಿ ಸಹಸ್ರಾರು ಪೈನ್ ಬೀಜಗಳನ್ನು ಚಳಿಗಾಲದಲ್ಲಿ ಇದನ್ನು ಆಹಾರವನ್ನಾಗಿ ಬಳಸುವ ಉದ್ದೇಶದಿಂದ ಹೂತುಹಾಕುತ್ತವೆ. ವಿಶೇಷತೆಯೆಂದರೆ; ಚಳಿಗಾಲದಲ್ಲಿ ಈ ಸ್ಥಳಗಳು ದಟ್ಟವಾಗಿ ಹಿಮದಿಂದ ಆವೃತವಾಗಿದ್ದರೂ ಕೂಡಾ ಹೂತುಹಾಕಿದ ಅದೇ ಸ್ಥಳಗಳನ್ನು ನಿಖರವಾಗಿ ಗುರುತಿಸಿ ಈ ಬೀಜಗಳನ್ನು ಹೆಕ್ಕಿಕೊಳ್ಳುತ್ತವೆ! ಕೊಲಂಬಿಯಾ ನದಿಯನ್ನು ಸೇರಿಕೊಳ್ಳುವ ನೀರಿನ ಹರಿವಿನಲ್ಲಿ ಜನಿಸುವ ಸಾಲ್ಮನ್ ಪಕ್ಷಿಯ ಮರಿಗಳು ನಂತರದಲ್ಲಿ ಸಮುದ್ರವನ್ನು ಸೇರುತ್ತವೆ. ಹಲವಾರು ವರ್ಷಗಳ ಕಾಲ ಸಮುದ್ರದಲ್ಲಿ ಬಹುದೂರದ ಪ್ರಯಾಣಮಾಡಿ ತಿರುಗಾಡಿದ ನಂತರ ಎಲ್ಲಿಯೂ ದಾರಿತಪ್ಪದೆ ಸಂತಾನೋತ್ಪತ್ತಿಗಾಗಿ ಮರಳಿ ತಾನು ಜನ್ಮಿಸಿದ ಸ್ಥಳಕ್ಕೆ ನಿಖರವಾಗಿ ಬಂದು ತಲುಪುತ್ತವೆ!
ಸಾವಿರಾರು ಮೈಲುಗಳ ದೂರದಲ್ಲಿರುವ ತದ್ರೂಪಿ ಅವಳಿಗಳು ತಮ್ಮ ಒಡಹುಟ್ಟಿದವರು ಅಪಘಾತದಲ್ಲಿ ಸತ್ತರೆ ತಕ್ಷಣವೇ ಗ್ರಹಿಸುತ್ತಾರೆ! ಹುಟ್ಟಿನಿಂದಲೇ ಬೇರ್ಪಟ್ಟ ಅವಳಿಗಳು ಪರಸ್ಪರ ಸಂಪರ್ಕದಲ್ಲಿ ಇಲ್ಲದೇ ಇದ್ದರೂ ಎಷ್ಟೋ ವರ್ಷಗಳ ನಂತರ ಆಕಸ್ಮಿಕವಾಗಿ ಭೇಟಿಯಾದರೂ ಒಂದೇ ವರ್ಷದಲ್ಲಿ ವಿವಾಹವಾಗಿರುತ್ತಾರೆ ಮತ್ತು ಸಮಾನ ಸಂಖ್ಯೆಯ ಮಕ್ಕಳನ್ನು ಹೊಂದಿರುತ್ತಾರೆ! ಇಂಡೋನೇಷ್ಯಾದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಮಿಂಚುಹುಳುಗಳು ಹಲವಾರು ಚದರ ಮೈಲುಗಳಷ್ಟು ವಿಸ್ತೀರ್ಣದಲ್ಲಿ ತಮ್ಮ ಬೆಳಕನ್ನು ಏಕಕಾಲದಲ್ಲಿ ಸಮನ್ವಯಗೊಳಿಸುತ್ತವೆ! ಆಫ್ರಿಕಾದಲ್ಲಿನ ಒಂದು ತಳಿಯ ಮರಗಳು ಪ್ರಾಣಿಗಳ ಹಿಂಡು ತಮ್ಮನ್ನು ಸಮೀಪಿಸುವುದನ್ನು ಗುರುತಿಸಿ ಅವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಮ್ಮ ಎಲೆಗಳಲ್ಲಿ ಟ್ಯಾನಿನ್‌ನ್ನು (ಪ್ರಾಣಿಗಳಿಗೆ ತಿನ್ನಲಾಗದ ರಾಸಾಯನಿಕ) ತಕ್ಷಣವೇ ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೆ ಹಲವಾರು ಮೈಲುಗಳಷ್ಟು ದೂರದಲ್ಲಿರುವ ಇತರ ಮರಗಳಿಗೂ ಈ ಸಂದೇಶವನ್ನು ರವಾನಿಸುತ್ತವೆ ಮತ್ತು ಆ ಸಂದೇಶವನ್ನು ಆಮರಗಳು ಕೂಡಲೇ ಸ್ವೀಕರಿಸುತ್ತವೆ ಮತ್ತು ಅದಕ್ಕನುಗುಣವಾಗಿಯೇ ವರ್ತಿಸುತ್ತವೆ!
ಕಡಲತೀರದಲ್ಲಿ ವಾಸಿಸುವ ತಾಯಿ ಕಡಲುಕೋಳಿಗಳು ತಮ್ಮ ಮರಿಗಳಿಗಾಗಿ ಕೊಕ್ಕಿನಲ್ಲಿ ಆಹಾರದೊಂದಿಗೆ ಮರಳಿದಾಗ ಕಡಲತೀರದಲ್ಲಿ ಕಿಕ್ಕಿರಿದಿರುವ ನೂರಾರು ಸಂತತಿಗಳ ನಡುವೆಯೂ ತಮ್ಮ ಮರಿಗಳನ್ನು ನಿಖರವಾಗಿ ಪತ್ತೆಮಾಡುತ್ತವೆ! ಯಾವುದೇ ಬೆಳಕು ಪ್ರವೇಶಿಸದಷ್ಟು ಸಮುದ್ರದ ಆಳದಲ್ಲಿ ಜೀವಿಸುವ ಹಾರ್ಸ್ಶೂ ಜಾತಿಯ ಏಡಿಗಳು ವರ್ಷಕ್ಕೊಮ್ಮೆ ಒಂದು ನಿರ್ಧಿಷ್ಟ ಹುಣ್ಣಿಮೆಯ ದಿನದಂದು ಸಂತಾನೋತ್ಪತ್ತಿ ಉದ್ದೇಶದ ಮಿಲನಕ್ಕಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಏಕಕಾಲದಲ್ಲಿ ದಡಕ್ಕೆ ಹೊರಬರುತ್ತವೆ! ಸೋಡಿಯಂ ಮತ್ತು ಕ್ಲೋರಿನ್‌ಗಳು ವೈಯಕ್ತಿಕವಾಗಿ ಮಾರಣಾಂತಿಕ ವಿಷವಾಗಿದ್ದರೂ ಅವುಗಳು ಉಪ್ಪಿನಲ್ಲಿ ಸಂಯೋಜನೆಗೊಂಡಾಗ ಜೀವಕ್ಕೆ ಪೂರಕವಾಗಿ ತಮ್ಮ ಮೂಲಭೂತ ರಾಸಾಯನಿಕ ಗುಣವನ್ನು ಮರುರೂಪಿಸುತ್ತವೆ! ಇಂತಹ ಅಸಾಮಾನ್ಯ ಅದ್ಭುತ ವಿಸ್ಮಯಕಾರಿ ಘಟನಾವಳಿಗಳು ಪ್ರಕೃತಿಯಲ್ಲಿ ಊಹನಾತೀತ ಪ್ರಮಾಣದಲ್ಲಿ ಪ್ರತಿ ಕ್ಷಣ ಸಂಭವಿಸುತ್ತಾ ಇರುತ್ತವೆ. ಈ ವಾಕ್ಯಗಳನ್ನು ಓದಲು ಮಿದುಳಿನ ಸೆರೆಬ್ರಲ್ ಕಾರ್ಟೆಕ್ಸ್ನಲ್ಲಿರುವ ಮಿಲಿಯಾಂತರ ನ್ಯೂರಾನ್‌ಗಳು ತತ್‌ಕ್ಷಣದಲ್ಲೇ ಒಂದು ವಿನ್ಯಾಸವನ್ನು ರೂಪಿಸಿಕೊಳ್ಳುತ್ತದೆ. ಮೂಲದಿಂದಲೂ ಜಗತ್ತು ನಿಮ್ಮೊಳಗೆಯೇ ಇದೆ. ಜೀವನರಹಸ್ಯವನ್ನು ಅರಿಯಲು ಕೇವಲ ಒಂದು ಸಂಕಲ್ಪದ ಅಗತ್ಯವಿದೆ. ಅದೇನೆಂದರೆ; “ಜೀವಕೋಶದಂತೆ ಜೀವಿಸು” ಎಂಬ ಬದ್ಧತೆ. ಆದರೆ ನಾವು ಹಾಗೆ ಮಾಡುವುದಿಲ್ಲ ಮತ್ತು ಅದಕ್ಕೆ ಕಾರಣವನ್ನು ಕಂಡುಹಿಡಿಯುವುದು ಕಷ್ಟವೇನಲ್ಲ. ಏಕೆಂದರೆ, ನಾವು ಜೀವಿಸಲು ನಮ್ಮದೇ ಆದ ಮಾರ್ಗಗಳನ್ನು ಹುಡುಕಿಕೊಂಡಿದ್ದೇವೆ ಮತ್ತು ಹುಡುಕುತ್ತಾ ಇರುತ್ತೇವೆ!
ಎರಡು ಶತಕೋಟಿ ವರ್ಷಗಳ ಹಿಂದೆ ಅಮೀಬಾಗಳಿಗೆ ಉತ್ತೇಜನ ನೀಡಿದ ಅದೇ ಆಮ್ಲಜನಕ ಮತ್ತು ಗ್ಲುಕೋಸ್‌ನಿಂದ ನಮ್ಮ ಜೀವಕೋಶಗಳೂ ಉತ್ತೇಜಿಸಲ್ಪಡುತ್ತಿವೆ. ಆದರೆ ನಾವು ಹೆಚ್ಚಿನ ಕೊಬ್ಬು, ಸಕ್ಕರೆ ಮುಂತಾದ ನಿಷ್ಪçಯೋಜಕ ಮತ್ತು ಹಾನಿಕಾರಕ ಆಹಾರಗಳಿಂದ ಆಕರ್ಷಿತರಾಗಿದ್ದೇವೆ. ಇಷ್ಟೆಲ್ಲಾ ಅಧ್ವಾನಗಳ ಮಧ್ಯೆಯೂ ನಮ್ಮ ದೇಹ ಅನುಸರಿಸುವ ನಿಖರ, ಸಂಪೂರ್ಣ ಮತ್ತು ಬಹುತೇಕ ಪರಿಪೂರ್ಣ ಬುದ್ಧಿವಂತಿಕೆಯಿಂದ ನಾವಿಂದು ಇಷ್ಟರಮಟ್ಟಿಗಾದರೂ ಜೀವಿಸುತ್ತಿದ್ದೇವೆ. ಹಳಿತಪ್ಪಿದ ನಮ್ಮ ಲೋಪಗಳು ಬೇರೆಯೇ ಮತ್ತು ದೊಡ್ಡದಾದ ಜೀವನಮಾದರಿಯನ್ನು ಸೂಚಿಸುತ್ತವೆ. ಜೀವಕೋಶದ ಬುದ್ಧಿವಂತಿಕೆಗೆ ಹಿಂತಿರುಗಲು ‘ನಾವು ಇತರರು ಅನುಸರಿಸಿದ ಹಳೆಯ ಮಾದರಿಗಳನ್ನು ಅನುಕರಣೆಮಾಡಿಕೊಂಡು ಜೀವಿಸುತ್ತಿದ್ದೇವೆ’ ಎಂಬುದನ್ನು ಮೊತ್ತಮೊದಲು ಅರಿಯಬೇಕಿದೆ ಮತ್ತು ಅದನ್ನು ಮರೆಯಬೇಕಿದೆ. ಜೀವನರಹಸ್ಯವನ್ನು ಸಂಪೂರ್ಣವಾಗಿ ಕಡೆಗಣಿಸುವ ಈ ಕೆಲವೊಂದು ಅಭ್ಯಾಸಗಳು ಮತ್ತು ನಂಬಿಕೆಗಳನ್ನು ನಮಗೆ ನಮ್ಮ ಬಾಲ್ಯದಿಂದಲೂ ಅನುಸರಿಸಲು ಕಲಿಸಲಾಗಿತ್ತು: ಭೌತಿಕಪ್ರಪಂಚವೊಂದಿದೆ; ಭೌತಿಕಪ್ರಪಂಚವು ವಸ್ತುಗಳು, ಘಟನೆಗಳು ಮತ್ತು ಜನರಿಂದ ತುಂಬಿದೆ; ಅಂತಹ ಜನರಲ್ಲಿ ನಾನೂ ಒಬ್ಬ ಮತ್ತು ನನ್ನ ಸ್ಥಾನಮಾನವು ಬೇರೆಯವರಿಗಿಂತ ಹೆಚ್ಚೇನೂ ಇಲ್ಲ; ನಾನು ಯಾರೆಂದು ಕಂಡುಹಿಡಿಯಲು ನಾನು ಭೌತಿಕಪ್ರಪಂಚವನ್ನು ಅನ್ವೇಷಿಸಬೇಕು ಎಂಬಿತ್ಯಾದಿ ನಂಬಿಕೆಗಳು ಬಿಡಿಸಲಾರದ ರೀತಿಯಲ್ಲಿ ಒಂದರೊಳಗೊಂದರಂತೆ ಪರಸ್ಪರ ಬೆಸೆದುಕೊಂಡಿವೆ. ಈ ರೀತಿಯ ನಂಬಿಕೆಗಳ ಗುಚ್ಛವು ನಮಗಾಗಲೀ, ನಮ್ಮ ಆತ್ಮಕ್ಕಾಗಲೀ ಆತ್ಮಶೋಧನೆಗೆ ಅವಕಾಶ ನೀಡುವುದಿಲ್ಲ. ಈ ಭೌತಿಕಪ್ರಪಂಚವು ನಮಗೆ ‘ವಾಸ್ತವ’ವೆಂದು ಮನವರಿಕೆಮಾಡಿರುವಂತೆ ಆಧುನಿಕ ವಿಜ್ಞಾನಕ್ಕೆ ಇದು ನಿಜವೆಂದು ಇನ್ನೂ ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಸಾಮಾನ್ಯ ಜನರು ವಿಜ್ಞಾನದ ಮೇಲೆ ತಮ್ಮ ಬದುಕನ್ನು ಕೇಂದ್ರೀಕರಿಸುವುದಿಲ್ಲ ಹಾಗಾಗಿ ಇದನ್ನು ಪ್ರಖರ ಸಮಸ್ಯೆಯೆಂದು ಭಾವಿಸಲಾಗುತ್ತಿಲ್ಲ. ಆದಾಗ್ಯೂ, ಬಾಹ್ಯಪ್ರಪಂಚವು ನಿಜವಾಗಿಯೂ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಮಿದುಳು ಯಾವುದೇ ಪುರಾವೆಗಳನ್ನು ನೀಡುವುದಿಲ್ಲ ಎಂಬುದಾಗಿ ನರಕೋಶವಿಜ್ಞಾನಿಗಳು ತಿಳಿಸುತ್ತಾರೆ. ಈ ಗೊಂದಲವನ್ನು ನಿವಾರಿಸಲು ಪ್ರಸ್ತುತ ಯಾವುದೇ ಮಾರ್ಗವಿಲ್ಲದೆ ಇರುವುದರಿಂದ ನಮಗೆ ಉಳಿದಿರುವುದು ಎರಡನೇ ಆಯ್ಕೆ: “ನಾವು ಜಗತ್ತಿನಲ್ಲಿಲ್ಲ; ಜಗತ್ತು ನಮ್ಮೊಳಗಿದೆ” ಎಂಬುದರ ದರ್ಶನ.