ನೀತಿ ಆಯೋಗ ಸಭೆಗೆ ಸಿಎಂ ಗೈರು: ಮಹಾ ಅಪರಾಧ

ಮೈಸೂರು: ಹೆಲಿಕಾಪ್ಟರ್ ತೆಗೆದುಕೊಂಡು ಬೀಗರ ಕೂಟ, ಮದುವೆಗೆ ಹೋಗುವ ಸಿಎಂ ಅವರಿಗೆ ನೀತಿ ಆಯೋಗದ ಸಭೆಗೆ ಹೋಗಲು ಆಗಲಿಲ್ವ. ಸಭೆಗೆ ಗೈರಾಗಿದ್ದು, ಇದು ಮಹಾ ಅಪರಾಧ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಫೋಟೋ ಇದೆ ಎಂಬ ಕಾರಣಕ್ಕೆ ಜನೌಷಧಿ ಘಟಕಗಳನ್ನು ಸರಕಾರಿ ಆಸ್ಪತ್ರೆಯಿಂದ ಎತ್ತಂಗಡಿ ಮಾಡಲಾಗುತ್ತಿದೆ. ಇದು ಕೆಟ್ಟ ಕೊಳಕು ಮನಸ್ಸಿನ ಸರಕಾರ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆದರೆ ಅವರ ಫೋಟೋವನ್ನು ಅದರಲ್ಲಿ ಹಾಕುತ್ತಾರೆ. ಆಗ ತೆಗೆಸುತ್ತಿರಾ ಎಂದು ಪ್ರಶ್ನಿಸಿದರು.

ತಮನ್ನಾ ಭಾಟಿಯಾ ಅವರಲ್ಲಿ ಮಿಲ್ಕಿ ಬ್ಯುಟಿ ಇದೆಯಂತೆ. ಏಕೆ ಕನ್ನಡಗರಾದ ಐಶ್ವರ್ಯರೈ, ರಶ್ಮಿಕಮಂದಣ್ಣ, ರಚಿತಾರಾಮ್ ಅವರಲ್ಲಿ ಮಿಲ್ಕಿ ಬ್ಯುಟಿ ಇಲ್ಲವೆ? ತಮ್ಮನಾ ಭಾಟಿಯಾ ಐಟಂ ಸಾಂಗ್ ಮಾಡುವ ನಟಿ. ಐಟಂಗೆ ಮಾಡುವವರಿಗೆ ೬ ಕೋಟಿ, ಜೈಲರ್ ಚಿತ್ರದಲ್ಲಿ ಒಂದು ಕೋಟಿಗೆ ಐಟಂ ಸಾಂಗ್‌ಗೆ ಕುಣಿದ ತಮ್ಮನಾಗೆ ೬ ಕೋಟಿ ರು. ಕೊಡಬೇಕಾ? ತಮನ್ನಾ ಅವರಿಗೆ ೨ ಕೋಟಿ ಅಂತೆ ಉಳಿದಿದ್ದು ಅಕ್ಕಪಕ್ಕದವರಿಗೆ ಅಂತೆ ಎಂದು ಆರೋಪಿಸಿದರು.

ಯದುವೀರ್ ಅವರನ್ನು ಬೇಕಾದರೆ ಮೈಸೂರು ಸ್ಯಾಂಡಲ್ ಸೋಪ್‌ಗೆ ಬ್ರಾಂಡ್ ಅಂಬಾಸಿಡರ್ ಮಾಡಬಹುದು. ಪುನಿತ್ ಒಂದು ರೂಪಾಯಿ ಪಡೆಯದೆ ನಂದಿನಿಗೆ ರಾಯಭಾರಿಯಾಗಿದ್ದರು. ಅವರ ಕುಟುಂಬದ ಶಿವರಾಜ್‌ಕುಮಾರ್ ಅವರನ್ನು ರಾಯಭಾರಿಯನ್ನಾಗಿ ಮಾಡಿ ಎಂದು ಆಗ್ರಹಿಸಿದರು.

ಮದ್ಯದ ಬೆಲೆ ಹೆಚ್ಚಿಸಿ ಯುವಕರು ಗಾಂಜಾ ಹೊಡೆಯುವಂತೆ ಮಾಡಿದ್ದಾರೆ. ಸಿದ್ದರಾಮಯ್ಯ ಕರ್ನಾಟಕವನ್ನೆ ಹಾಳು ಮಾಡಿಬಿಟ್ಟರು. ಯುವಕರು ಎಲ್ಲರೂ ದಾರಿ ತಪ್ಪಿ ಬಿಟ್ಟರು. ಕರ್ನಾಟಕವನ್ನು ತಿಪ್ಪೆಗುಂಡಿ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

ಪತ್ರ ಬರೆದರೂ ಓದುವರಿಲ್ಲ: ಉನ್ನತ ಸ್ಥಾನದಲ್ಲಿದ್ದ ಕಾಂಗ್ರೆಸ್ ದುಸ್ಥಿತಿಯತ್ತ ಸಾಗಿದೆ. ಇದನ್ನು ನೋಡಿದರೆ ನೋವಾಗುತ್ತದೆ. ಮೊದಲು ಹೈಕಮಾಂಡ್ ಮೇಲೆ ಗೌರವ ಇತ್ತು. ಈಗ ಇಲ್ಲದಂತಾಗಿದೆ. ಕಾಂಗ್ರೆಸ್ ಪರಿಸ್ಥಿತಿ ಬಗ್ಗೆ ಹೈಕಮಾಂಡ್‌ಗೆ ಪತ್ರ ಬರೆಯಲು ಸಿದ್ದ. ಆದರೆ ಪತ್ರವನ್ನು ಓದುವವರೆ ಇಲ್ಲ. ಜಯರಾಮ್ ರಮೇಶ್ ಅವರು ಅಯೋಗ್ಯ ಆಯೋಗ ಎಂದು ನೀತಿ ಆಯೋಗವನ್ನು ಟೀಕಿಸಿದ್ದಾರೆ. ನಿಜಕ್ಕೂ ನೋವಾಗುತ್ತದೆ. ಇಂತವರಿಂದಲೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದರು.