ಹುಬ್ಬಳ್ಳಿ: ಪೊಲೀಸರೆಂದರೆ ಭಯ ಅಲ್ಲ. ಭರವಸೆ ಎಂಬುದನ್ನು ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಸಾಬೀತು ಪಡಿಸಿದ್ದಾರೆ.
ಸರಿ ಸುಮಾರು ೩೦ ವಯಸ್ಸಿನ ಆಸುಪಾಸಿನ ಯುವಕ ಹುಬ್ಬಳ್ಳಿಯ ಹೃದಯ ಭಾಗದ ಮಾರುಕಟ್ಟೆಯಲ್ಲಿ ನಿರ್ಗತಿಕನಾಗಿ ರಸ್ತೆ ಬದಿಯಲ್ಲಿ ಹುಚ್ಚನಂತೆ ಕುಳಿತಿದ್ದವನಿಗೆ ಹೊಸ ಜೀವನ ನೀಡುವ ಮೂಲಕ ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮಹಮ್ಮದ್ ರಫೀಕ್ ತಹಸೀಲ್ದಾರ್ ಮಾನವೀಯತೆಯನ್ನು ಮೆರೆದಿದ್ದಾರೆ.
ಮನೆ, ಸಂಬಂಧಿಕರು ಇದ್ದರೂ, ಮಾನಸಿಕ ಅಸ್ವಸ್ಥನ ರೀತಿಯಲ್ಲಿ ತಿರುಗಾಡುತ್ತಿದ್ದ ಮಂಟೂರು ರಸ್ತೆಯ ವಿನಾಯಕ ಎಂಬ ಯುವಕನನ್ನು ವಿಚಾರಿಸಿ, ಆತನಿಗೆ ಕಟಿಂಗ್, ಶೇವಿಂಗ್ ಮಾಡಿಸಿ ಹೊಸ ಬಟ್ಟೆಗಳನ್ನು ಕೊಡಿಸಿದ್ದಾರೆ. ಅಲ್ಲದೆ, ತಮ್ಮದೇ ವ್ಯಾಪ್ತಿಯಲ್ಲಿ ಒಂದು ಕೆಲಸ ಕೊಡಿಸಿ ಆತ ಬದಕು ಕಟ್ಟಿಕೊಳ್ಳಲು ಆಸೆರೆಯಾಗಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಈ ರೀತಿಯ ಕಾರ್ಯಗಳಿಗೆ ಪ್ರೇರಣೆ ಆಗಿದ್ದು, ಕೇವಲ ಅಪರಾಧಿಗಳನ್ನು ಮಟ್ಟ ಹಾಕುವುದು ಮಾತ್ರವಲ್ಲದೇ ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡಲೇಬೇಕು ಎಂದು ಇನ್ಸಪೆಕ್ಟರ್ ತಹಸೀಲ್ದಾರ್ ತಿಳಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಗಳಿಸುತ್ತಿದೆ.