ನಿಮ್ಮಿ ಅಕ್ಕನ ಬಜೆಟ್ಟು… ಸೀರೆ ಸಲುವಾಗಿ ತಲೆಕೆಟ್ಟು…

ಪ್ರತಿವರ್ಷ ಬಜೆಟ್ ಮಂಡಿಸುವಾಗ ಮಿನ್ನ, ಮಿನ್ನ ಬಣ್ಣದ ಸೀರೆ ಉಟ್ಟುಕೊಳ್ಳುವ ನಿಮ್ಮಕ್ಕ ಈ ಬಾರಿ ಬಜೆಟ್ ಮಂಡಿಸುವಾಗ ಯಾವ ಬಣ್ಣದ ಸೀರೆ ಉಡಬಹುದು ಎಂದು ಮಹಿಳಾ ಮಂಡಳದಲ್ಲಿ ಭಯಂಕರ ಚರ್ಚೆ ನಡೆಯುತ್ತಿದೆ. ಈ ಬಾರಿ ಗ್ಯಾರಂಟಿ ಸಿರಗುಪ್ಪ ಸಿಲ್ಕೇ ಅವರು ಉಡುವುದು ನೋಡುತಿರಿ ಎಂದು ಫಾಕ್ಡಮ್ಮ ಎದ್ದು ನಿಂತು ಹೇಳಿದರು. ನೋವೇ ಸಾಧ್ಯವೇ ಇಲ್ಲ ಅವರಿಗೆ ಆ ಸೀರೆ ಸೂಟ್ ಆಗಲ್ಲ ಮೇಲಾಗಿ ಕರ‍್ರೂ ಚಾಯ್ಸಿಂಗ್ ಇಲ್ಲ ಎಂದು ಕರಿಭಾಗೀರತಿ ತಕರಾರು ಎತ್ತಿದರು. ಅಯ್ಯೋ ಬುಡಿ ತೋಪಸೆರಗಿನ ಸೀರೆ ಉಟ್ಟುಕೊಂಡು ಬಜೆಟ್ ಮಂಡಿಸದಿದ್ದರೆ ನನ್ನ ಕೇಳಿ ಎಂದು ತ್ರಿಲೋಕ ಜ್ಞಾನಿ ಗ್ಯಾನಮ್ಮ ಹೇಳಿದರು. ಅಯ್ಯೋ ನೀವೆಲ್ಲ ಹೇಳುವ ರೀತಿ ಯಾವುದೂ ಅಲ್ಲ. ಅವರು ಕಾಟನ್ ಸೀರೆ ಉಟ್ಟುಕೊಂಡು ಕೈಯಲ್ಲಿ ಸೂಟ್‌ಕೇಸ್ ಹಿಡಿದುಕೊಂಡು ಬಂದರೆ ಎಷ್ಟು ಚಂದ ಏನ್ಕತೆ.. ಲೊಂಡೆನುಮನ ಚಾನಲ್‌ನಲ್ಲಿ ಅದೇ ಸೀನ್ ಬಹಳ ಸಲ ತೋರಿಸಿದ್ದರಿಂದ ಆಕೆ ಅದೇ ಕಾಟನ್ ಸೀರೆ ಗ್ಯಾರಂಟಿ ಎಂದು ಕ್ವಾಟಿಗ್ವಾಡಿ ಸುಂದ್ರವ್ವ ಜೋರಾದ ಧ್ವನಿಯಲ್ಲಿ ಹೇಳಿದಾಗ.. ಕಂಟ್ರಂಗಮ್ಮತ್ತಿ ನೀವು ಏನೇನು ಗೆಸ್ ಮಾಡುತ್ತೀರೋ ಎಲ್ಲವೂ ತಪ್ಪು. ನಾನು ಸೆವೆಂತ್ ಇದ್ದಾಗ ಆಕೆ ಸಿಕ್ಸ್ತನಲ್ಲಿ ಕಲಿಯುತ್ತಿದ್ದಳು ಶಾಲೆ ಬಿಟ್ಟಮೇಲೆ ನಾನು ಆಕೆ ನಡೆದುಕೊಂಡೇ ಮನೆಗೆ ಹೋಗುತ್ತಿದ್ದೆವು. ಹಾಗಾಗಿ ಆಕೆಯ ಸ್ವಭಾವ ನನಗೆ ಗೊತ್ತಿದ್ದಷ್ಟು ಯಾರಿಗೂ ಗೊತ್ತಿಲ್ಲ. ಮೊನ್ನೆ ನಾನು ಮಿಸ್ಡ್ಕಾಲ್ ಕೊಟ್ಟೆ. ವಾಪಸ್ ಅವಳೇ ಮಾಡಿದಾಗ.. ಅದು ಇದು ಮಾತನಾಡುತ್ತ ಬಜೆಟ್‌ಗೆ ಸಾಡಿ ಕಳಸ್ಲಾ? ಎಂದು ಕೇಳಿದೆ. ಬೇಡ ಬೇಡ… ಆಮೇಲೆ ಅಪೋಜೇಷನ್‌ದವರು ಟೀಕೆ ಮಾಡುತ್ತಾರೆ. ಆದ್ದರಿಂದ ಸಿಂಪಲ್ ಸಾಡಿ ನೋಡವ ಎಂದು ಹೇಳಿದಳು. ಅವಳೇ ಹಾಗೆ ಹೇಳುತ್ತಾಳೆ ನೀವು ಏನೇನಾದರೂ ಮಾತನಾಡುತ್ತೀರಲ್ಲ? ಎಂದು ಜಬರಿಸಿದ ಹಾಗೆ ಮಾಡಿದಳು. ಹೀಗೆ ಮಹಿಳಾ ಮಂಡಳದ ಎಲ್ಲ ಸದಸ್ಯೆಯರೂ ತಮಗೆ ತಿಳಿದ ಹಾಗೆ ಹೇಳಿದರು. ಅಷ್ಟರಲ್ಲಿ ಕರಿಭಾಗೀರತಿ ಪತಿ ಅಲ್ಲಿಗೆ ಬಂದವನೇ ನೀನು ಇಲ್ಲಿದ್ದೀಯ? ನಾನು ಎಲ್ಲೆಲ್ಲೋ ಹುಡುಕಿದೆ. ಅಡುಗೆ ಮಾಡುವುದನ್ನು ಬಿಟ್ಟು ಇಲ್ಲಿ ಹರಟೆ ಹೊಡೆಯಲು ಬಂದಿದಾಳೆ. ನಿಮ್ಮಕ್ಕ ಎಂಥ ಸೀರೆನಾದರೂ ಉಟ್ಟುಕೊಳ್ಳಲಿ, ನಿಮ್ಮಕ್ಕನ ಬಜೆಟ್ಟು-ನಿಮಗೆಲ್ಲ ತಲೆಕೆಟ್ಟು…. ಮೊದಲು ನೀನು ಮನೆಗೆ ನಡಿ ಎಂದು ಬೈಯ್ದು ಮನೆಗೆ ಕರೆದುಕೊಂಡು ಹೋದ. ಇನ್ನ ನಮ್ಮ ಗಂಡಂದಿರೂ ಬಂದುಗಿಂದಾರು ಎಂದು ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿದರು.