ನಾವಿನ್ನೂ ಭಿಕ್ಷೆ ಬೇಡ್ಕೊಂಡೇ ಇರಬೇಕಾ: ಕೊತ್ತೂರು ಆಕ್ರೋಶ

ಕೋಲಾರ: ಈ ದೇಶದಲ್ಲಿ ಅನ್ಯಾಯ ಆಗಿರೋದು ನನಗೆ ಮತ್ತು ನಮ್ಮ ಜನಾಂಗಕ್ಕೇರೀ. ನಮಗೇನು ಅಧಿಕಾರ ಬೇಡ್ವಾ. ನಾವಿನ್ನೂ ಭಿಕ್ಷೆ ಬೇಡ್ಕೊಂಡು, ಶಾಸ್ತ್ರ ಹೇಳಿಕೊಂಡು, ಬೀದಿಬೀದಿ ಅಲೆದಾಡಿಕೊಂಡೇ ಇರಬೇಕಾ… ನನಗೆ ಸಚಿವ ಸ್ಥಾನ ಬೇಕೇಬೇಕು.
ಇದು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಹಕ್ಕೊತ್ತಾಯ.
ಶನಿವಾರ ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾರೂ ಕೂಡ ಸಚಿವ ಸ್ಥಾನದ ಭರವಸೆ ಕೊಟ್ಟಿಲ್ಲ. ಆದರೆ ನನಗೆ ಮಂತ್ರಿಗಿರಿ ಬೇಕೇ ಬೇಕು ಎಂದು ಪ್ರತಿಪಾದಿಸಿದರು.
ಇಡೀ ದೇಶದಲ್ಲಿ ಅತ್ಯಂತ ಹಿಂದುಳಿದ ಜನಾಂಗ ಎಂದರೆ ಅಲೆಮಾರಿ ಬುಡಕಟ್ಟು ಸಮುದಾಯದವರು. ನಮ್ಮ ಸಮುದಾಯಕ್ಕೆ ಅನ್ಯಾಯ ಆಗಿದೆ. ನಾನು ಎರಡು ಬಾರಿ ಶಾಸಕನಾಗಿದ್ದರೂ ನನಗೆ ಅಧಿಕಾರದ ಅವಕಾಶ ಸಿಕ್ಕಿಲ್ಲ. ನಮ್ಮ ಅಲೆಮಾರಿ ಜನಾಂಗದಲ್ಲಿ ಇದುವರೆಗೂ ಶಾಸಕನಾಗಿರುವ ಏಕೈಕ ರಾಜಕಾರಣಿ ನಾನು ಎಂದು ಅವರು ವಿವರಿಸಿದರು.
ಎರಡು ಬಾರಿ ಶಾಸಕನಾಗಿದ್ದರೂ ನನಗೆ ಅವಕಾಶ ಸಿಗದಿದ್ದರೆ ಹೇಗೆ? ಸಚಿವ ಸ್ಥಾನಕ್ಕೆ ನಾನು ಈ ಬಾರಿ ಆಕಾಂಕ್ಷಿ. ನನಗೆ ಮಂತ್ರಿಗಿರಿ ಬೇಕೇ ಬೇಕು. ನಮಗೆ ಅವಕಾಶ ಕೊಡಲಿಲ್ಲ ಅಂದರೆ ನಾವು ಇನ್ನು ಎಷ್ಟು ದಿನ ಬೀದಿ ಬೀದಿ ಸುತ್ಕೊಂಡು, ಭಿಕ್ಷೆ ಬೇಡ್ಕೊಂಡು, ಶಾಸ್ತ್ರ ಹೇಳಿಕೊಂಡು ಇರಬೇಕು ಎಂದು ಮೇಜುಕುಟ್ಟಿ ಕೊತ್ತೂರು ಪ್ರಶ್ನಿಸಿದರು.
ಕೋಲಾರದಲ್ಲಿ ಗೆದ್ದಿರುವ ನಾಲ್ಕು ಕಾಂಗ್ರೆಸ್ ಶಾಸಕರ ಪೈಕಿ ಬಂಗಾರಪೇಟೆ ಎಸ್.ಎನ್‌ ನಾರಾಯಣಸ್ವಾಮಿ ಮತ್ತು ಕೆಜಿಎಫ್ ರೂಪಕಲಾ ಶಶಿಧರ್ ಅವರಿಗೆ ಕ್ಯಾಬಿನೆಟ್ ದರ್ಜೆಯ ನಿಗಮಗಳ ಅಧ್ಯಕ್ಷ ಸ್ಥಾನ ಕೊಡಲಾಗಿದೆ. ಇವತ್ತು ನಂಜೇಗೌಡರಿಗೆ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಯಾವುದೇ ಅಧಿಕಾರ ಇಲ್ಲದೆ ಇರುವವನು ನಾನೊಬ್ಬನೇ. ಹಾಗಾಗಿ ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ನನ್ನನ್ನು ಮಂತ್ರಿ ಮಾಡಲೇಬೇಕು ಎಂದು ಕೊತ್ತೂರು ಹಕ್ಕೊತ್ತಾಯ ಮಂಡಿಸಿದರು.