ನಾನು ದೇಶಕ್ಕೋಸ್ಕರ ಬಲಿಯಾಗಲು ಸಿದ್ಧ

ಜಮೀರ್

ಕಲಬುರಗಿ: ನೂರಕ್ಕೆ ನೂರರಷ್ಟು ದೇಶಕ್ಕೋಸ್ಕರ ಬಲಿಯಾಗಲು ಸಿದ್ಧನಿದ್ದೇನೆ. ಭಾರತ ಯುದ್ಧ ಮಾಡುವಂಗ ಇದ್ದರೆ ನನಗೆ ಅವಕಾಶ ಕೊಡಲಿ. ನಾನು ಸೂಸೈಡ್ ಬಾಂಬ್ ಕಟ್ಟಿಕೊಂಡು ಹೋಗುತ್ತೇನೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ ಅಹ್ಮದ್ ಪುನರುಚ್ಚರಿಸಿದರು.
ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನನಗೆ ದೇಶ ಮುಖ್ಯ, ನೂರಕ್ಕೆ ನೂರರಷ್ಟು ಯುದ್ದಕ್ಕೆ ಹೋಗಲು ರೆಡಿ ಇದ್ದೇನೆ. ದೇಶಕ್ಕಾಗಿ ಬಲಿಯಾಗಲು ನಾನು ಸಿದ್ಧನಿದ್ದೇನೆ. ಯುದ್ಧದ ವಿಚಾರದಲ್ಲಿ ಕೇಂದ್ರ ಸರಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ತೆಗೆದುಕೊಳ್ಳಲಿ, ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ. ನೀವು ಏನಾದರೂ ತೀರ್ಮಾನ ಕೈಗೊಳ್ಳಿ ಎಂಬುದಾಗಿ ಹೇಳಲಾಗಿದೆ ಎಂದು ಹೇಳಿದರು.
ವಕ್ಫ್ ವಿಚಾರದಲ್ಲಿ ಕೇಂದ್ರ ಸರಕಾರದ ಕಾಯ್ದೆಗೆ ವಿರೋಧಿಸಿ ಕಾಂಗ್ರೆಸ್ ಪಕ್ಷ ನಿರ್ಣಯ ಕೈಗೊಂಡಿದೆ. ಪ್ರಮುಖವಾಗಿ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ನಮಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.