ನಾಡು ನುಡಿಗಾಗಿ ಧ್ವನಿ ಎತ್ತಲೇನಡ್ಡಿ?

ನೆಲ, ಜಲ, ಭಾಷೆ, ಧರ್ಮ… ಇವುಗಳ ಅಸ್ಮಿತೆಯ ಪ್ರಶ್ನೆ ಮೂಡಿದಾಗ ಭಾರತದ ಜನ ಭಾವಾವೇಶಕ್ಕೆ ಒಳಗಾಗುತ್ತಾರೆ. ಆಂದೋಲನ- ಹೋರಾಟಗಳಿಗೂ ಇಳಿಯುತ್ತಾರೆ. ಆಕ್ರೋಶದ ವಾಗ್ಬಾಣಗಲು ವಿನಿಮಯವಾಗುತ್ತವೆ.
ಭಾಷೆಯ ಕುರಿತು, ವಿಶೇಷವಾಗಿ ದಕ್ಷಿಣ ಭಾರತದ ಭಾಷೆಗಳ ಕುರಿತು, ಅವುಗಳ ಅಸ್ತಿತ್ವ- ಬೆಳವಣಿಗೆಗಳ ಅಭಿಮಾನ ಉಳಿಸಿಕೊಳ್ಳಲು ಸಾಕಷ್ಟು ಆಂದೋಲನ- ಹೋರಾಟಗಳು ನಡೆದಿವೆ. ಅನ್ಯ ಭಾಷೆಗಳ ಹೇರಿಕೆ ಹಾಗೂ ಅನ್ಯ ಭಾಷಿಕರ ದಬ್ಬಾಳಿಕೆ ವಿಶೇಷ ಸ್ಥಾನ ಮಾನಗಳನ್ನು ಕೂಡ ಕನ್ನಡಿಗರು, ತಮಿಳು, ತೆಲಗು, ಮರಾಠಿ ಭಾಷಿಕರು ಪ್ರಶ್ನಿಸಿ ಬೀದಿಗಿಳಿದದ್ದೂ ಇದೆ. ಸರ್ಕಾರಗಳ ಕಾರ್ಯವೈಖರಿಯನ್ನು ಟೀಕಿಸಿ ಅಲುಗಾಡಿಸಿದ್ದೂ ಇದೆ.
ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ, ಅದರಲ್ಲೂ ಭಾಷಾವಾರು ರಾಜ್ಯ ವಿಂಗಡಣೆ ನಂತರ ಪ್ರಾದೇಶಿಕ ಭಾಷೆಗಳ ಕುರಿತ ಕೇಂದ್ರ ಸರ್ಕಾರದ ನೀತಿ- ಧೋರಣೆ ಸದಾ ಚರ್ಚಿತ ಮತ್ತು ಪ್ರಶ್ನಾರ್ಹವಾಗಿಯೇ ಉಳಿದ ಅಂಶ.
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದುಕೊಳ್ಳಲು ಏನೆಲ್ಲ ಹೋರಾಟ, ಕಸರತ್ತು, ಆಂದೋಲನ ನಡೆಸಬೇಕಾಯಿತು? ಕನ್ನಡಕ್ಕಷ್ಟೇ ಅಲ್ಲ. ಮಲಯಾಳಿ, ತೆಲಗು, ಒಡಿಯಾಕ್ಕೂ ಇದೇ ಸ್ಥಿತಿ.
ಈ ಪ್ರಶ್ನೆ ಈಗೇಕೆ ಉದ್ಭವವಾಗಿದೆ ಎಂದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಭಾಷಾ ಅಭಿವೃದ್ಧಿಗೆ, ಆ ಭಾಷಿಕರ ಸಂಸ್ಕೃತಿಗೆ, ಸಂಶೋಧನೆಗೆ ಎಷ್ಟು ಅನುದಾನ ನೀಡಿದೆ ಎನ್ನುವುದು ಬಹಿರಂಗವಾಯಿತು. ಈ ಹತ್ತು ವರ್ಷದ ಅವಧಿಯಲ್ಲಿ ಸಂಸ್ಕೃತ ಭಾಷೆಯ ಪ್ರಚಾರ, ಅಭಿವೃದ್ಧಿ ಮತ್ತು ಸಂಶೋಧನೆಗೆ ೨೫೩೨.೫೯ ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಅದೇ ಶಾಸ್ತ್ರೀಯ ಭಾಷೆಗಳೆಂದು ಘೋಷಿಸಲ್ಪಟ್ಟಿರುವ ಕನ್ನಡ, ಮಲಯಾಳಿ, ತಮಿಳು, ತೆಲಗು, ಒರಿಯಾ ಭಾಷೆಗಳನ್ನು ಪ್ರೋತ್ಸಾಹಿಸಲು ಈ ಅವಧಿಯಲ್ಲಿ ನೀಡಿರುವುದು ಕೇವಲ ೧೪೭ ಕೋಟಿ ರೂಪಾಯಿಗಳನ್ನು ಮಾತ್ರ!
ಸಂಸ್ಕೃತಕ್ಕೆ ಪ್ರತಿ ವರ್ಷ ಸರಾಸರಿ ೨೩೦ ಕೋಟಿ ಅನುದಾನ ನೀಡಿದರೆ, ಈ ಪ್ರಾದೇಶಿಕ ಭಾಷೆಗಳೆಲ್ಲ ಸೇರಿ ಕೇವಲ ೧೩.೪೧ ಕೋಟಿಯನ್ನು ವಾರ್ಷಿಕವಾಗಿ ಕೊಡಲಾಗಿದೆ. ಅಂದರೆ ಎಲ್ಲ ಭಾಷೆಗಳಿಗೂ ಬಿಡುಗಡೆಯಾದ ಅನುದಾನ ಶೇ ೧೭ಕ್ಕೂ ಹೆಚ್ಚಿನ ಪ್ರಮಾಣದ ಹಣ ಸಂಸ್ಕೃತಕ್ಕೆ ದೊರಕಿದೆ.
ಭಾಷೆಯ ಬಳಕೆದಾರರ ಲೆಕ್ಕಾಚಾರ ಹಾಕಿದರೆ ಸಂಸ್ಕೃತ ಭಾಷೆಯನ್ನು ಕಲಿಯುವವರು, ಮಾತನಾಡುವವರು ನಗಣ್ಯ. ಅದೇ ಪ್ರಾದೇಶಿಕ ಭಾಷೆಗಳು, ವಿಶೇಷವಾಗಿ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ೧೧ ಭಾಷೆಗಳ ಭಾಷಿಕರು, ಜನಸಂಖ್ಯೆ ಮತ್ತು ಇವುಗಳನ್ನು ಮಾತನಾಡುವವರ ಸಂಖ್ಯೆ ಗಮನಾರ್ಹ.
ಶಾಸ್ತ್ರೀಯ ಭಾಷೆ ಪಟ್ಟಿಯಲ್ಲಿ ಹಿಂದಿ, ಉರ್ದು ಮತ್ತು ಸಿಂಧಿ ಭಾಷೆಗಳಿಲ್ಲ. ಸಂಸ್ಕೃತ, ಹಿಂದಿ, ಉರ್ದು ಹೊರತುಪಡಿಸಿ ಉಳಿದ ಹತ್ತು ಶಾಸ್ತ್ರೀಯ ಭಾಷೆಗಳ ಒಟ್ಟಾರೆ ಭಾಷಿಕರ ಸಂಖ್ಯೆ ೨೧.೯೯ರಷ್ಟಿದೆ. ಹಿಂದಿ ತಮ್ಮ ಮಾತೃಭಾಷೆ ಎಂದು ಘೋಷಿಸಿಕೊಂಡವರು ೪೩.೬೩ರಷ್ಟು ಜನ ಮಾತ್ರ. ಉರ್ದು ಮಾತನಾಡುವ ಜನಸಂಖ್ಯೆ ೪.೧೯ರಷ್ಟು..
ಇಷ್ಟಿದ್ದೂ ಅನ್ಯಭಾಷೆಗಳ ಬೆಳವಣಿಗೆ ಮತ್ತು ಪ್ರಚಾರಕ್ಕೆ ಇಷ್ಟು ನಿಕೃಷ್ಟ ರೀತಿಯಲ್ಲಿ ಅನುದಾನ ಬಿಡುಗಡೆ ಮಾಡಿರುವುದು ಏಕೆ? ಸಂಸ್ಕೃತಕ್ಕೆ ಹತ್ತು ವರ್ಷದಲ್ಲಿ ೨೫೩೨.೫೯ ಕೋಟಿ ದೊರಕಿದ್ದರೆ, ಶೇ, ೪.೯ರಷ್ಟು ಭಾಷಿಕರ ಉರ್ದುಗೆ ೮೩೭.೯೪ ಕೋಟಿ, ಹಿಂದಿಗೆ ೪೨೬.೯೯ ಕೋಟಿ ನೀಡಲಾಗಿದೆ.
ಹಿಂದಿ ಮತ್ತು ಉರ್ದು ಶಾಸ್ತ್ರೀಯ ಭಾಷೆಗಳೇನಲ್ಲ. ಆದರೆ ಮಾನ್ಯತೆ ಪಡೆದ ೨೧ ಭಾಷೆಗಳ ಪಟ್ಟಿಯಲ್ಲಿವೆ. ತಮಿಳಿಗೆ ೧೧೩.೪೮ ಕೊಟ್ಟರೆ, ತೆಲಗು ಭಾಷೆಗೆ ೧೨.೬೫, ಕನ್ನಡಕ್ಕೆ ೧೨.೨೮ ಕೋಟಿ, ಒರಿಯಾಕ್ಕೆ ೪.೬೩ ಕೋಟಿ, ಮಲಯಾಳಂಗೆ ೪.೫೨ ಕೋಟಿ ರೂಪಾಯಿಗಳನ್ನು ನೀಡಲಾಗಿದೆ.
ಈಗ ಎದ್ದಿರುವ ಪ್ರಶ್ನೆ ಏನೆಂದರೆ, ಕನ್ನಡಿಗರನ್ನು ಪ್ರತಿನಿಧಿಸುವ ೨೮ ಸಂಸದರು, ಅಲ್ಲದೇ ರಾಜ್ಯದ ರಾಜ್ಯಸಭಾ ಸದಸ್ಯರು ಹಾಗೂ ಕೇಂದ್ರದಲ್ಲಿರುವ ರಾಜ್ಯದ ಸಚಿವರೂ ಕೂಡ ಏಕೆ ಈ ತಾರತಮ್ಯವನ್ನು ಪ್ರಶ್ನಿಸುತ್ತಿಲ್ಲ? ಕನ್ನಡದ ಘನ ಸರ್ಕಾರ ಹಾಗೆಯೇ ಕನ್ನಡದ ಪ್ರಾತಿನಿಧಿಕ ಸಂಸ್ಥೆಗಳು ಏಕೆ ಈವರೆಗೆ ವಿರೋಧಿಸುತ್ತಿಲ್ಲ?
ಅನುದಾನ ತಾರತಮ್ಯದ ಬಗ್ಗೆ ದೆಹಲಿಯ ಜಂತರ್ ಮಂತರ್ ಮಾತ್ರವಲ್ಲ, ರಾಷ್ಟçಪತಿಯವರೆಗೂ ದೂರು ಒಯ್ದ ಮುಖ್ಯಮಂತ್ರಿಗಳು ಕೇಂದ್ರದ ಕನ್ನಡ ವಿರೋಧಿ ನೀತಿಯನ್ನು ಏಕೆ ಆಕ್ಷೇಪಿಸಿಲ್ಲ?
ಎರಡು ಸಾವಿರ ವರ್ಷಗಳಿಗೂ ಹೆಚ್ಚು ಸಾಂಸ್ಕೃತಿಕ ಮತ್ತು ಸಾಹಿತ್ಯಕ ಪರಂಪರೆ- ಇತಿಹಾಸವನ್ನು ಹೊಂದಿರುವ ಕನ್ನಡಕ್ಕೆ ಬೀದಿಗಿಳಿದು ಹೋರಾಟ ಮಾಡಿ ಶಾಸ್ತ್ರೀಯ ಸ್ಥಾನಮಾನವನ್ನು ಪಡೆಯಬೇಕಾಯಿತು. ಆದರೆ ಆ ನಂತರ ಬಿಡುಗಡೆಯಾದ ಹಣ ಅಥವಾ ಪ್ರೋತ್ಸಾಹ ಅತ್ಯಂತ ಏನೇನೂ ಇಲ್ಲ.
೨೦೨೩, ಜನವರಿ ೭ರಂದು ಮಾಜಿ ಮುಖ್ಯಮಂತ್ರಿ, ಇಂದಿನ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಒಂದು ಟ್ವೀಟ್ ಮಾಡಿದ್ದರು. ಕನ್ನಡ ಅಭಿವೃದ್ಧಿಗಾಗಿ ಬರೀ ೩ ಕೋಟಿ ನೀಡಿದ್ದೀರಿ. ತಮಿಳಿಗೆ ೪೩ ಕೋಟಿ ಕೊಟ್ಟಿದ್ದೀರಿ. ಸಂಸ್ಕೃತಕ್ಕೆ ಬರೋಬ್ಬರಿ ೬೪೩ ಕೋಟಿ ನೀಡುತ್ತಿರುವ ಕೇಂದ್ರದ ಕ್ರಮ ಅತ್ಯಂತ ಖಂಡನಾರ್ಹ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿ ೧೩ವರ್ಷಗಳೇ ಆದರೂ, ಈ ಅವಧಿಯಲ್ಲಿ ಸಿಕ್ಕ ಅನುದಾನ ಕೇವಲ ೩ ಕೋಟಿ ಎಂದರೆ ಎಂತಹ ಅಪಹಾಸ್ಯ? ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ' ಎಂದು ಪ್ರಶ್ನಿಸಿದ್ದರು ಕುಮಾರಸ್ವಾಮಿ ! ಆಗ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕುಮಾರಸ್ವಾಮಿ ಗುಡುಗಿದ್ದರು... ಆಗ ಬಿಜೆಪಿ, ಮೋದಿ ಕಟ್ಟರ್ ವಿರೋಧಿಯಾಗಿದ್ದ ಕುಮಾರಸ್ವಾಮಿಯವರು ಈಗ ಅದೇ ಧ್ವನಿ ಎತ್ತಬೇಕಲ್ಲವೇ? ಅವರೇ ಖುದ್ದು ನಿಂತು ಈ ತಾರತಮ್ಯ ನಿವಾರಿಸಬೇಕಲ್ಲವೇ? ಹಾವೇರಿ ೮೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡರು,ಹಿಂದಿ- ಸಂಸ್ಕೃತಗಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಪ್ರಾದೇಶಿಕ ಭಾಷೆಗಳಿಗೆ ನೀಡುತ್ತಿಲ್ಲ; ಈ ಕುರಿತು ಧ್ವನಿ ಎತ್ತಿ’ಎಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಅಣತಿ ನೀಡಿದ್ದರು. ಈಗ ಬೊಮ್ಮಾಯಿ ಎಂಪಿ. ಪ್ರಶ್ನಿಸುತ್ತಾರೆಯೇ?
ರಾಷ್ಟçಧ್ವಜ, ನೆಲಜಲದ ಬಗ್ಗೆ ಭಾವಾವೇಶದ ಭಾಷಣ ಮಾಡುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕನ್ನಡಿಗರಿಗಾದ ತಾರತಮ್ಯ ನಿವಾರಿಸುವ ಜವಾಬ್ಧಾರಿ ತೆಗೆದುಕೊಳ್ಳಬೇಕಲ್ಲವೇ?
ನಾವು ಕಾವೇರಿ ನೀರು ಕುಡಿದು ಕನ್ನಡ ಉಸಿರಾಡುವವರು ಎಂಬ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಈ ತಾರತಮ್ಯದ ಬಗ್ಗೆ ಸೊಲ್ಲೆತ್ತಬೇಕಿತ್ತಲ್ಲವೇ?
ಕನ್ನಡದ ವ್ಯಾಕರಣದ ಪಾಠ, ಭಾಷೆ ಮತ್ತು ಪ್ರಭುತ್ವದ ಬಗ್ಗೆ ಮಾತನಾಡಿ ಅಭಿಮಾನ ತೋರಿಸುವ ಸಿದ್ದರಾಮಯ್ಯ, ಕೆಂಪೇಗೌಡರ ವರಪುತ್ರ ಎನ್ನುವ ಡಿ.ಕೆ.ಶಿವಕುಮಾರ ಅವರೇಕೆ ಗುಡುಗುತ್ತಿಲ್ಲ?
ಆದರೆ ನಮ್ಮ ಪ್ರಶ್ನೆ, ಕನ್ನಡದ ಜನಪ್ರತಿನಿಧಿಗಳು, ಸರ್ಕಾರ ಬಾಯಿ ಸತ್ತವರಂತೆ ಇರುವುದು ಏಕೆ?
ದುರಂತ ಎಂದರೆ, ಈ ಕುರಿತು ಆಮೂಲಾಗ್ರವಾಗಿ ಹೋರಾಟಕ್ಕೆ ಇಳಿಯಬೇಕಾದ ಕನ್ನಡದ ಪ್ರಾತಿನಿಧಿಕ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಅದರ ಆಳ್ವಿಕ, ಅಧ್ಯಕ್ಷರ ವ್ಯವಹಾರ ಎಲ್ಲವೂ ಗೊಂದಲ ಮತ್ತು ಡೋಲಾಯಮಾನ ಸ್ಥಿತಿಯಲ್ಲಿವೆ ! ಈ ಸಂಸ್ಥೆಯ ಮೂಲ ಧ್ವನಿಯೇ ಉಡುಗಿ ಹೋಗಿದೆಯೇ?
ಮಹಾರಾಷ್ಟç ತ್ರಿಭಾಷಾ ಸೂತ್ರವನ್ನು ಜನಾಕ್ರೋಶದ ಹಿನ್ನೆಲೆಯಲ್ಲಿ ಹಿಂಪಡೆಯಿತು. ಕರ್ನಾಟಕದಲ್ಲಿ ಏಕಿಲ್ಲ? ಎಂದು ಸಿಎಂ ಅವರನ್ನು ಕೇಳಿದರೆ, ನಾವು ಚಿಂತಿಸುತ್ತೇವೆ' ಎನ್ನುವ ಉತ್ತರ !! ಇಡೀ ದೇಶದಲ್ಲಿಯೇ ಸ್ಥಳೀಯರಿಗೆ ಉದ್ಯೋಗ ದೊರಕಬೇಕು ಎಂಬುದರ ಹಿನ್ನೆಲೆಯಲ್ಲಿ ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ಸರ್ಕಾರ ರಚಿಸಿ ವರದಿ ಪಡೆದಿತ್ತು. ಸುಮಾರು ನಾಲ್ಕು ದಶಕಗಳಾದವು. ಅದರ ಅನುಷ್ಠಾನ ಅಲ್ಪಸ್ವಲ್ಪ. ಈಗ ಖಾಸಗಿ ಸಂಸ್ಥೆಗಳಲ್ಲಿ, ಕರ್ನಾಟಕದ ಉದ್ಯಮಗಳಲ್ಲಿ, ಬೃಹತ್ ಉದ್ಯಮಗಳಲ್ಲಿ, ಮಾಹಿತಿ ತಂತ್ರಜ್ಞಾನ ಆಧರಿತ ದೊಡ್ಡ ಉದ್ಯಮಗಳಲ್ಲಿ ಕನ್ನಡಿಗರಿಗೆ ಶೇ ೭೫ರಷ್ಟು ಮೀಸಲಾತಿ ಕುರಿತು ಮಸೂದೆ ಸರ್ಕಾರದ ಮಟ್ಟದಲ್ಲಿ ರೂಪುಗೊಳ್ಳುತ್ತಿದೆ. ಇದು ಹಿಂದೆಯೇ ಮಂಡಿತವಾಗಬೇಕಿತ್ತು. ಆದರೆ ಐಟಿ ದಿಗ್ಗಜರು, ಕೆಲವು ಮಲ್ಟಿ ನ್ಯಾಷನಲ್ ಕಂಪನಿಗಳ ಪ್ರತಿನಿಧಿಗಳುನಾವು ಕರ್ನಾಟಕ ಬಿಟ್ಟು ಹೋಗುತ್ತೇವೆ. ಸೂಕ್ತ, ಬುದ್ಧಿವಂತರನ್ನು ಎಲ್ಲಿಂದಾದರೂ ಹುಡುಕಿ ತರಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿದರು. ಮುಖ್ಯಮಂತ್ರಿಗಳೇ ಹಿಂಪಡೆದರು. ಪ್ರತಿಪಕ್ಷಗಳು ಒಳಗೊಳಗೇ ಖುಷಿ ಪಟ್ಟವು. ಈಗ ಮತ್ತೆ ಕನ್ನಡ ಮೀಸಲಾತಿ ಮಸೂದೆಯನ್ನು ಮಂಡಿಸುವ ಪ್ರಸ್ತಾವವನ್ನು ಕಾರ್ಮಿಕ ಮಂತ್ರಿ ಸಂತೋಷ ಲಾಡ್ ಮಾಡಿದ್ದಾರೆ. ಆದರೆ ಸಧ್ಯದ ಧೋರಣೆ ನೋಡಿದರೆ ಅಂತಹ ಛಾತಿ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತು ಕಾರ್ಮಿಕ ಮಂತ್ರಿ ಸಂತೋಷ್ ಲಾಡ್‌ಗೂ ಇದ್ದಂತಿಲ್ಲ.
ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಕಾಳಜಿಗಿಂತ ಬೆದರಿಕೆ ಒಡ್ಡುವುದೇ ಜಾಸ್ತಿಯಾಗಿದೆ. ಜನರ ಜೀವನಾಡಿಯಾಗಿರುವ ಆಲಮಟ್ಟಿ ಆಣೆಕಟ್ಟಿನ ಎತ್ತರ, ಕೃಷ್ಣಾ ಮೇಲ್ದಂಡೆ ಯೋಜನೆಯ ಗೆಜೆಟ್ ನೊಟಿಫಿಕೇಶನ್, ಮಹದಾಯಿ ಐತಿರ್ಪೀನ ಹಿನ್ನೆಲೆಯಲ್ಲಿ ಹಸಿರು ನ್ಯಾಯ ಮಂಡಳಿ ಪರವಾನಗಿ ಪಡೆಯುವುದು, ಭದ್ರಾ ಯೋಜನೆಗೆ ರಾಷ್ಟ್ರೀಯ ಪುರಸ್ಕಾರ, ಗಡಿ ಭಾಗದ ಬೆಳವಣಿಗೆ ಅಭಿವೃದ್ಧಿ ಯೋಜನೆಗಳು ಯಾವುವೂ ಆಗುತ್ತಿಲ್ಲ. ಇದನ್ನು ಆಳುವ ಸಂಸದರು ಪ್ರಶ್ನಿಸುತ್ತಲೂ ಇಲ್ಲ.
ಈ ಮಧ್ಯೆ ಎರಡು ವರ್ಷಗಳ ನಿರಂತರ ಅಹವಾಲಿನ ನಂತರ, ನೆಲ ಜಲ, ಗಡಿ ಪ್ರದೇಶದ ಸಮಸ್ಯೆಗಳ ಕುರಿತು ನಿಗಾ ವಹಿಸಿ, ಪರಿವೀಕ್ಷಣೆ ಮಾಡಲು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಸಮರ್ಥ ವ್ಯಕ್ತಿಗೆ ಈ ಭಾಗದ ಜನರ ಕಾಳಜಿ- ಕಳಕಳಿಯ ಹೊಣೆಯನ್ನು ವಹಿಸಲಾಗಿದೆ. ಅಷ್ಟರ ಮಟ್ಟಿಗೆ ಸಮಾಧಾನ !!
ಇದೆಲ್ಲದರ ಹೊರತಾಗಿ, ಭಾಷಾ ತಾರತಮ್ಯ ಮತ್ತು ನೆಲ- ಜಲದ ರಕ್ಷಣೆಯ ವಿಷಯಕ್ಕೆ ರಾಜಕೀಯ ಮತ್ತು ಪಕ್ಷ ಸಿದ್ಧಾಂತ ಏಕೆ? ಇದನ್ನು ಮೀರಿ ನಮ್ಮ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಲೇನಡ್ಡಿ?