ಬೀದರ್ ಜಿಲ್ಲೆಯ ಕಲ್ಪನಾ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ ಸಚಿವರು
ಬೆಂಗಳೂರು: ಸರ್ಕಾರದ ಯೋಜನೆಯೊಂದು ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವುದರಲ್ಲೇ ಆ ಯೋಜನೆಯ ಸಾರ್ಥಕತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನರೇಗಾ ಯೋಜನೆ ಹಣದಲ್ಲಿ ಪದವಿ ಪೂರೈಸಿದ ಕಲ್ಪನಾ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಯುಪಿಎ ಸರ್ಕಾರ ಜಾರಿಗೆ ತಂದ ನರೇಗಾ ಭಾರತದ ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿ ಯೋಜನೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ನರೇಗಾ ಯೋಜನೆಯು ಗ್ರಾಮೀಣ ಜನರ ಬದುಕನ್ನು ಹಸನಾಗಿಸಿದ ಹಲವು ಯಶೋಗಾಥೆಗಳಿವೆ. ರಾಜ್ಯದಲ್ಲಿ ನರೇಗಾ ಯೋಜನೆಯಿಂದಾಗಿ ಗ್ರಾಮಗಳ ಆರ್ಥಿಕ ಸುಧಾರಣೆಯ ಜೊತೆಗೆ ಅಭಿವೃದ್ಧಿ ಕೆಲಸಗಳು ನಡೆದಿವೆ. ರಾಜ್ಯದಲ್ಲಿ ನರೇಗಾ ಯೋಜನೆಯ ಫಲಾನುಭವಿಗಳಲ್ಲಿ ಮಹಿಳೆಯರೇ ಹೆಚ್ಚು ಎನ್ನುವುದು ಹೆಗ್ಗಳಿಕೆಯಾಗಿದೆ.
ಬೀದರ್ ತಾಲೂಕಿನ ಹೊಕ್ರಾಣ (ಬಿ) ಗ್ರಾಮದ ಕಲ್ಪನಾ ಪ್ರಕಾಶ್ ಕೋಟೆ ಅವರು ನರೇಗಾ ಯೋಜನೆಯ ಕೂಲಿ ಕೆಲಸದಿಂದ ಸಂಪಾದಿಸಿದ ಹಣದಲ್ಲಿ ಬಿಎ ಪದವಿ ಪೂರೈಸಿರುವ ವಿಚಾರ ಸ್ಫೂರ್ತಿದಾಯಕ. ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿದ ಹಣವನ್ನು ಅವರು ಶೈಕ್ಷಣಿಕ ಅಗತ್ಯಗಳಿಗೆ ಬಳಸಿಕೊಂಡು ಪದವಿ ಪೂರೈಸಿದ್ದು ಅತ್ಯಂತ ಸ್ಫೂರ್ತಿದಾಯಕ ಸಂಗತಿ. ಅವರ ಈ ಸಾಧನೆಯು ಮಹಿಳಾ ಸಬಲೀಕರಣಕ್ಕೆ ನೈಜ ಅರ್ಥ ನೀಡುತ್ತದೆ. ಕಲ್ಪನಾ ಪ್ರಕಾಶ್ ಕೋಟೆ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ. ಅವರ ನಡೆ ಇತರೆ ಮಹಿಳೆಯರಿಗೆ ಸ್ಪೂರ್ತಿಯಾಗಲಿ ಎಂದು ಆಶಿಸುತ್ತೇನೆ. ‘ಯೋಜನೆ ಒಂದು, ಪ್ರಯೋಜನ ಹಲವು‘ ಎನ್ನುವ ಮಾತು ನರೇಗಾ ಯೋಜನೆಗೆ ಸೂಕ್ತವಾದುದು ಎಂದಿದ್ದಾರೆ.