ಮೈಸೂರು: ಐಪಿಎಲ್ ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ೧೧ ಮಂದಿ ಸಾವನ್ನಪ್ಪಿದ ಸುದ್ದಿ ಕೇಳಿ ನೋವಾಯಿತು. ತುಳಿದಾಡಿ ಪ್ರಾಣ ಕೊಡುವುದು ಏನಿದೆ. ಆಕಾಶ ನೋಡಲು ನೂಕುನುಗ್ಗಲು ಯಾಕೆ. ಅಲ್ಲಿ ಹೋಗಿ ಆಟಗಾರರನ್ನು ನೋಡಲು ಆಗುತ್ತದಾ? ಇಲ್ಲಿ ಯಾರನ್ನೋ ದೂರುವ ಬದಲು ನಮ್ಮ ತಪ್ಪು, ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಬೇಸರದಿಂದ ನುಡಿದರು.
ನಮ್ಮ ಜೀವ, ಜೀವನಕ್ಕೆ ನಾವೇ ಜವಾಬ್ದಾರರು, ಸರ್ಕಾರ ಅಲ್ಲ. ಪರಿಹಾರದಿಂದ ಹೋದ ಪ್ರಾಣ ಬರುವುದಿಲ್ಲ. ಜನ ಈ ಬಗ್ಗೆ ಯೋಚನೆ ಮಾಡಬೇಕು ಎಂದರು. ತುಳಿತ ಭಾರತದೊಂದಿಗೆ ಬಂದು ಬಿಟ್ಟಿದೆ. ಇಂತಹದೇ ಘಟನೆಗಳು ಕುಂಭಮೇಳ, ತಿರುಪತಿಯಲ್ಲೂ ನಡೆದಿವೆ. ನೀರು, ಉಟ ಫ್ರೀಯಾಗಿ ಕೊಡುತ್ತಿದ್ದಾರೆ ಎಂದರೆ ಜನ ಓಡಿ ಹೋಗುತ್ತಾರೆ. ಆಕಾಶಕ್ಕೆ ಚಪ್ಪರ ಹಾಕಲು ಆಗುವುದಿಲ್ಲ. ಜನರಲ್ಲಿ ಪರಿವರ್ತನೆ ಆಗಬೇಕು. ಶಿಸ್ತು, ಸಂಯಮ ಮೈಗೂಡಿಸಿಕೊಳ್ಳಬೇಕು. ಆಗ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಸಲಹೆ ನೀಡಿದರು.
ದೇಶದಲ್ಲಿ ಅಭಿವೃದ್ಧಿ ಆದಷ್ಟು ಬುದ್ಧಿ ಕೆಳಮಟ್ಟಕ್ಕೆ ಹೋಗುತ್ತಿದೆ. ಇದು ಆಗಬಾರದು. ನಾವೂ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಬೇಕು. ಎಲ್ಲವನ್ನೂ ಸರ್ಕಾರದ ಮೇಲೆ ಬೊಟ್ಟು ಮಾಡಬಾರದು ಎಂದು ಹೇಳಿದರು.