ಆರನೇ ಚಾನ್ಸಿಗೆ ಎಸ್‌ಎಸ್ ಎಲ್ಸಿ ಪರೀಕ್ಷೆ ಬರೆದಿದ್ದ ತಿಗಡೇಸಿ ಫಲಿತಾಂಶ ಬಂದ ದಿನವೇ ನಾಪತ್ತೆ ಆಗಿದ್ದ. ಅವರ ಅಪ್ಪ ತಿರುಕೇಸಿ ಊರತುಂಬ ಹುಡುಕಾಡಿದ..ಬಂಧು ಬಳಗದವರಿಗೆ ಹೇಳಿದ.. ಪೊಲೀಸರಲ್ಲಿಯೂ ದೂರು ನೀಡಿದ್ದ. ತಿಗಡೇಸಿ ಎಲ್ಲಿ ಹೋಗಿರಬಹುದು ಎಂದು ಊರವರು ಚರ್ಚೆ ಮಾಡತೊಡಗಿದರು. ಅವನು ಬೇಸರ ಮಾಡಿಕೊಂಡು ಹಳ್ಳ ದಾಟಿ ಆ ಊರಿಗೆ ಹೋಗಿದ್ದಾನೆ ಎಂದು ಒಬ್ಬರು ಅಂದರೆ… ಇಲ್ಲಿಲ್ಲ ಅವನೇನೂ ಹಳ್ಳದಾಟಿ ಹೋಗಿಲ್ಲ… ಈ ದಾರಿಯಿಂದ ಹೋಗಿದಾನೆ ಎಂದು ಇನ್ನೊಬ್ಬರು ಅಂದರು. ಅಂವ ಎಲ್ಲಿ ಹೋಗಿದಾನೆ ಎಂದು ಅಂಜನ ಹಚ್ಚಿ ನೋಡಿದರೆ ಸಿಗಬಹುದೇನೋ ನೋಡಿ ಎಂದು ಕಿವುಡನುಮಿ ಫಾರ್ಮಾನು ಹೊರಡಿಸಿದಳು. ಅಂವ ಓಡಿ ಹೋಗೋ ಮನಿಷಾ ಅಲ್ಲ ಅಂತ ತಾತಪ್ಪೋರು ಅನುಭವದ ಮಾತು ಹೇಳಿದರು. ತಮ್ಮ ತಮ್ಮಲ್ಲಿ ಚರ್ಚೆ ಅಲ್ಲದೇ ಮರುದಿನದಿಂದ ತಿರುಕೇಸಿಯನ್ನು ಮುದ್ದಾಂ ಭೇಟಿಯಾಗಿ ತಿಗಡೇಸಿ ಪತ್ತೆ ಆಯಿತಾ? ಅವನು ಯಾಕೆ ಓಡಿಹೋದ? ಎಂದು ಕೇಳುತ್ತಿದ್ದರು. ಇನ್ನೊಬ್ಬರು ಬಂದು ಓಡಿ ಹೋದನೋ ಅಥವಾ ಬಸ್ಸು ಲಾರಿ ಹತ್ತಿಕೊಂಡು ಹೋದನೋ? ಎಂದು ಕೇಳುತ್ತಿದ್ದರು. ಸುಮ್ಮನೇ ಇಲ್ಲದ ಉಸಾಪರಿ ಏಕೆ ಎಂದು ತಿರುಕೇಸಿಯೂ ಸಹ ಮನೆಬಿಟ್ಟು ಹೊರಗೆ ಬರುತ್ತಿರಲಿಲ್ಲ. ನಾಟಕ ಮಾಸ್ತರ ಕರೆಪ್ಪ ಬಂದು ಮೊನ್ನೆ ಕನಕಾಪುರ ಬಸ್‌ಸ್ಟ್ಯಾಂಡ್‌ನಲ್ಲಿ ಒಬ್ಬನನ್ನು ನೋಡಿದೆ ಸೇಮ್ ತಿಗಡೇಸಿ ಇದ್ದ ಹಾಗೆ ಇದ್ದ ಅದಕ್ಕಾಗಿ ಒಂದ್ಸಲ ಹೋಗಿ ನೋಡ್ತಿರೇನೋ ಎಂದು ಸಂದೇಶ ಕಳುಹಿಸಿದ್ದ. ಮರುದಿನ ತಿರುಕೇಸಿ ಅಲ್ಲಿ ಹುಡುಕಾಡಿ ಬಂದ… ತಿಗಡೇಸಿ ಸಿಗಲೇ ಇಲ್ಲ. ನಾನು ಇವನಿಗೇನು ಅಂದಿದ್ದೇನೆ ಯಾಕೆ ಹೋದ ಎಂದು ತಿರುಕೇಸಿಯೂ ಹಗಲಿರುಳು ಚಿಂತೆ ಮಾಡತೊಡಗಿದ್ದ. ಅವತ್ತು ಮಟಮಟ ಮಧ್ಯಾಹ್ನ ತಿಗಡೇಸಿ ಊರಿಗೆ ಬಂದ. ಗುರುತು ಹಿಡಿಯಬಾರದು ಎಂದು ಎಂಥದ್ದೋ ಶರ್ಟು ಹಾಕಿಕೊಂಡು ಮುಖಕ್ಕೆ ಏನೇನೋ ಹಚ್ಚಿಕೊಂಡು ತಲೆತಗ್ಗಿಸಿಕೊಂಡು ಮನೆಗೆ ಬಂದ. ತಿರುಕೇಸಿ ಮನೆಯ ಬಾಗಿಲಲ್ಲೇ ಕುಳಿತಿದ್ದರು. ತಿಗಡೇಸಿ ಆತನನ್ನು ನೋಡಿ… ಅಪ್ಪಾ… ಅಪ್ಪಾ… ನನ್ನ ಕ್ಷಮಿಸು… ಎಂದು ದುಃಖಿಸಿದ. ಯಾಕೆ ಎಂದು ಕೇಳಿದ್ದಕ್ಕೆ ಈ ಬಾರಿಯೂ ನಾನು ಎಸ್‌ಎಸ್‌ಎಲ್‌ಸಿ ಫೇಲು ಅಂದ. ಕೂಡಲೇ ತಿರುಕೇಸಿ… ನೀನು ನನ್ನ ಮಗ ಹತ್ತು ಚಾನ್ಸ್ ಇಲ್ಲದೇ ಅದು ಹೇಗೆ ಪಾಸಾಗುತ್ತಿ ನಡಿ ಒಳಗೆ ಎಂದು ಹೇಳಿದ.