ಧೈರ್ಯ-ಜೀವನೋತ್ಸಾಹ ಬೆಳೆಸಿಕೊಳ್ಳಿ

ಶಿವಮೊಗ್ಗ: ಸಾಧಿಸುವ ಛಲ, ಧೈರ್ಯದೊಂದಿಗೆ ವಿದ್ಯಾರ್ಥಿಗಳು ಜೀವನೋತ್ಸಾಹ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಶಿಕ್ಷಣ ತಜ್ಞ, ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ.ಗುರುರಾಜ ಕರಜಗಿ ಸಲಹೆ ನೀಡಿದರು.
ಸಾಗರ ಪಟ್ಟಣದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್.ಬಿ.ಮತ್ತು ಎಸ್.ಬಿ.ಎಸ್.ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನೋತ್ಸಾಹ, ಕಠಿಣ ಪರಿಶ್ರಮ ಮತ್ತು ಸಾಮಾಜಿಕ ಕಾಳಜಿ ಈ ಮೂರು ಗುಣಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ಸಾಧಿಸುವ ಮಾರ್ಗದಲ್ಲಿ ಆತ್ಮವಿಶ್ವಾಸ, ಧೈರ್ಯ ಸದಾ ಜೊತೆಗಿರಬೇಕು. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದ ತಕ್ಷಣ ಅಥವಾ ಫೇಲ್ ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಜೀವನ ಅಲ್ಲ. ಯಾವುದೇ ಹಂತದಲ್ಲೂ ಸೋಲನ್ನು ಒಪ್ಪಿಕೊಳ್ಳಬಾರದು. ಇದು ನನ್ನಿಂದ ಸಾಧ್ಯವಿದೆ ಎಂಬ ಮನೋಬಲ ಅಂತರಂಗದಿಂದ ಬರಬೇಕು. ಸುಲಭವಾಗಿ ಯಾವುದೂ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ತಮಗೋಸ್ಕರ ಬದುಕಿದವರನ್ನು ಪ್ರಪಂಚ ಮರೆಯುತ್ತದೆ. ಆದರೆ ಬೇರೆಯವರಿಗಾಗಿ ಬದುಕುವವನನ್ನು ಸದಾ ಸ್ಮರಿಸುತ್ತಾರೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದವರನ್ನು ಜನರು ಯಾವತ್ತೂ ನೆನಪಿಸುತ್ತಾರೆ. ಬೇರೆಯವರ ಕಣ್ಣೀರನ್ನು ಒರೆಸುವ ಮನಸ್ಥಿತಿ ಇಲ್ಲವಾದರೆ ಶಿಕ್ಷಣಕ್ಕೆ ಅರ್ಥವಿಲ್ಲ ಎಂದ ಅವರು, ಸಮಾಜದಲ್ಲಿ ಭ್ರಷ್ಟರಾಗದೆ ಪ್ರಾಮಾಣಿಕವಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕರಿಗೆ ತಾವು ಕಲಿಸುವ ವಿಷಯದ ಬಗ್ಗೆ ಪ್ರೀತಿ ಇರಬೇಕು. ವಿದ್ಯಾರ್ಥಿಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಶಿಕ್ಷಕರು ಎಷ್ಟು ತಿಳಿದುಕೊಂಡರೂ ಸಾಲದು. ತರಗತಿಗೆ ಹೋಗುವಾಗ ಕಲಿಸುವ ವಿಷಯದ ಬಗ್ಗೆ ಹೆಚ್ಚು ಓದಿಕೊಂಡಿರಬೇಕು. ವೃತ್ತಿ ಬಗ್ಗೆ ಕೀಳರಿಮೆ ಇಟ್ಟುಕೊಳ್ಳದೆ ವೃತ್ತಿ ಗೌರವ ಕಾಪಾಡಿಕೊಳ್ಳಬೇಕು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಡಾ.ಗುರುರಾಜ ಕರಜಗಿ ಅವರನ್ನು ಸಂಸ್ಥೆಯಿಂದ ಅಭಿನಂದಿಸಿ ಗೌರವಿಸಲಾಯಿತು. ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.