ಯಾವುದೋ ಕೆಲಸಕ್ಕಾಗಿ ತಿಗಡೇಸಿ ಮೂರಂತಿಸ್ತಿನ ಬಿಲ್ಡಿಂಗ್ ಸುತ್ತುತ್ತಿದ್ದ. ಒಬ್ಬರ ಹತ್ತಿರ ಹೋದರೆ ಈ ಫೈಲ್ ಇನ್ನೊಬ್ಬರ ಹತ್ತಿರ ಕೊಟ್ಟಿದ್ದೇನೆ ಎಂದು ಕಳಿಸುತ್ತಿದ್ದರು. ಅವರ ಕಡೆ ಹೋದರೆ ಎರಡನೇ ಅಂತಸ್ತಿನ ಮೂರನೇ ಕೋಣೆಗೆ ಕಳುಹಿಸಿದ್ದೇನೆ ಬರಬೇಕು ಅಂತ ಹೇಳುತ್ತಿದ್ದರು. ಅಲ್ಲಿ ಹೋದರೆ… ನೋ.. ನೋ ಆ ಫೈಲು ಒಂದನೇ ಅಂತಸ್ತಿನಲ್ಲಿ ಅದಿದು ಇದೆಯಲ್ಲ ಅದರ ಪಕ್ಕದಲ್ಲಿರುವ ಚಿಕ್ಕ ಕೋಣೆಗೆ ಕಳುಹಿಸಿದ್ದೇನೆ ಎಂದು ಅನ್ನುತ್ತಿದ್ದರು. ಅಲ್ಲಿಗೆ ಹೋದರೆ…ಅಯ್ಯೋ ಅವರ ಸೋದರ ಮಾವನ ಸೊಸೆಯ ತಮ್ಮನ ಕಸಿನ್ ಇದ್ದಾರಲ್ಲ ಅವರ ಮಗಳ ಮದುವೆ ಇದೆ ಅಲ್ಲಿಗೆ ಹೋಗಿದ್ದಾರೆ ಬರುವುದು ಇನ್ನೂ ನಾಲ್ಕೈದು ದಿನವಾಗುತ್ತದೆ ಆಗ ಬಂದುಬಿಡಿ ಎಂದರು. ಆಯಿತು ಎಂದ ತಿಗಡೇಸಿ ಐದಾರು ದಿನ ಬಿಟ್ಟು ಹೋದ. ಮದುವೆ ಮುಗಿಸಿ ಬಂದಿದ್ದ ಅವರು, ಬನ್ನಿ ಬನ್ನಿ ನಾನು ನಿಮ್ಮದೇ ದಾರಿ ನೋಡುತ್ತಿದ್ದೆ. ನಿಮ್ಮ ಫೈಲು ಎರಡನೇ ಅಂತಸ್ತಿನಲ್ಲಿದೆ ಅಂದರು.. ಅಲ್ಲಿಗೆ ಹೋದರೆ ಇಲ್ಲಿಲ್ಲ ನಿಮ್ಮ ಫೈಲು ಮೂರನೇ ಬಿಲ್ಡಿಂಗ್‌ಗೆ ಹೋಗಿದೆ ಅಲ್ಲಿಗೆ ಹೋಗಿ ಅಂದರು ಅಲ್ಲಿಗೆ ಹೋದರೆ ಸ್ವಲ್ಪ ತಿಂಗಳು ತಡೀರಿ ಸಾಹೇಬರು ಹೂಂ ಅಂದ ಕೂಡಲೇ ನಿಮ್ಮ ಕೆಲಸ ಆಗುತ್ತದೆ ಎಂದು ಹೇಳಿದರು. ಅವರು ಯಾವಾಗ ಹೂಂ ಅನ್ನುತ್ತಾರೆ ಎಂದು ಕೇಳಿದಾಗ… ಅದು ಹೇಳುವುದಕ್ಕೆ ಆಗಲ್ಲ… ಹೂಂ ಅಂದರೆ ಸಾಕು ನಿಮ್ಮ ಕೆಲಸ ಗ್ಯಾರಂಟಿ ಎಂದು ಹೇಳಿ ಕಳುಹಿಸಿದರು. ತೀರ ಬೇಸತ್ತು ಎಳನೀರು ಕುಡಿದರಾಯಿತು ಎಂದು ಬಿಲ್ಡಿಂಗ್ ಮುಂದೆ ನಿಂತಿದ್ದ ತಿಗಡೇಸಿಗೆ ಒಬ್ಬರು ಬಂದು ಸಾಹೇಬ್ರೆ ಇಲ್ಲಿ ಮೂರಂತಸ್ತಿನ ಬಿಲ್ಡಿಂಗ್ ಇದೆಯಂತಲ್ಲ ಎಲ್ಲಿದೆ? ಎಂದು ಕೇಳಿದರು. ಆಗ ತಿಗಡೇಸಿ… ಸಾ.. ನೀವು ಸೀದಾ ಹೋಗಿ ಎಡಕ್ಕೆ ಒಂದು ಗಿಡ ಇದೆ..ಅದರ ಬಲಕ್ಕೆ ತಿರುಗಿಕೊಳ್ಳಿ ಅಲ್ಲಿ ಸಿಮೆಂಟ್ ಬೆಂಚ್ ಇದೆ. ಅಲ್ಲಿಂದ ಬಲಕ್ಕೆ ತಿರುಗಿಕೊಳ್ಳಿ ಅಲ್ಲಿ ಮೂರು ಮನೆಗಳಿವೆ… ಒಂದು ಎರಡು ಬಿಟ್ಟು ಮೂರನೇ ಮನೆಗೆ ಹೋಗಿ… ಆ ಮನೆಯಲ್ಲಿ ಮೂರು ಟೇಬಲ್‌ಗಳಿವೆ ಒಂದು ಎರಡು ಬಿಟ್ಟು ಮೂರನೇ ಟೇಬಲ್‌ಗೆ ಹೋಗಿ.. ಅಲ್ಲಿ ಮೂರು ಪುಸ್ತಗಳಿವೆ ಒಂದು ಎರಡು ಬಿಟ್ಟು ಮೂರನೇ ಪುಸ್ತಕ ತಗೆಯಿರಿ ಅದರಲ್ಲಿ ಮೂರನೇ ಪುಟದಲ್ಲಿ ನಮ್ಮ ಅಜ್ಜಿ ಫೋಟೋ ಇದೆ ಬೇಕಾದರೆ ಅದು ಮುಟ್ಟಿ ಹೇಳುತ್ತೇನೆ ದೇವರಾಣೆ ಈ ಬಿಲ್ಡಿಂಗ್ ಅಡ್ರೆಸ್ ನನಗೆ ಗೊತ್ತಿಲ್ಲರೀ ಅಂದ… ಬಿಲ್ಡಿಂಗ್ ವಿಳಾಸ ಕೇಳಿದವ ಮೂರ್ಛೆ ಹೋಗಿ ಬಿದ್ದಿದ್ದ.