ದಾಂಡೇಲಿಯಲ್ಲಿ ಸುರಿದ ಮಳೆಗೆ ಮನೆಗಳಿಗೆ ನುಗ್ಗಿದ ಚರಂಡಿಯ ಕೊಳಚೆ ನೀರು

ದಾಂಡೇಲಿ : ಬುಧವಾರ ಸುರಿದ ಮಳೆಗೆ ದಾಂಡೇಲಿಯ ಲಿಂಕ್ ರಸ್ತೆಯ ಕೆಳ ಅಂತಸ್ತಿನ ಎರಡು ಮನೆಗಳಿಗೆ ನೀರು ಸತತವಾಗಿ ಮೂರನೇ ಬಾರಿ ನುಗ್ಗಿದೆ.ಸತತವಾಗಿ ಮಳೆ ಬೀಳುತ್ತಿದ್ದು ನೀರು ಸರಾಗವಾಗಿ ಹರಿದು ಹೋಗಲು ನಗರಸಭೆ ಕ್ರಮ ಕೈಗೊಳ್ಳದಿದ್ದಲ್ಲಿ ಇನ್ನೂ ಕೆಲವು ಮನೆ, ಅಂಗಡಿಗಳಿಗೆ ನೀರು ಹರಿಯುವ ಸಾಧ್ಯತೆ ಇದೆ. ಲಿಂಕ್ ರಸ್ತೆಯ ಹಿಂಬದಿಯಲ್ಲಿರುವ ಮುಖ್ಯ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಪ್ಲಾಸ್ಟಿಕ್, ಕಸಕಡ್ಡಿ, ಕಲ್ಲು ಮಣ್ಣುಗಳಿಂದ ತುಂಬಿ ಬ್ಲೊಕ್ ಆಗಿರುವುದು ಸಮಸ್ಯೆಗೆ ಕಾರಣವಾಗಿದೆ. ಇದೊಂದು ಪ್ರಮುಖ ದೊಡ್ಡ ಚರಂಡಿಯಾಗಿದ್ದು ಆರೇಳು ಅಡಿ ಆಳವನ್ನು ಹೊಂದಿದೆ. ನಗರಸಭೆ ಅಧ್ಯಕ್ಷರು, ಪೌರಾಯುಕ್ತರು, ಸ್ಥಳ ಪರಿಶೀಲನೆ ನಡೆಸಿ ಸಿಬ್ಬಂದಿಗಳ ನೆರವಿನೊಂದಿಗೆ ಜೆ.ಸಿ.ಬಿ.ಯಂತ್ರದ ಮೂಲಕ ತ್ಯಾಜ್ಯವನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಕೆಲಸ ಪ್ರಾರಂಭಿಸಿದ್ದಾರೆ. ಆದರೆ ಸತತ ಬೀಳುತ್ತಿರುವ ಮಳೆಯಿಂದ ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ. ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡದಿದ್ದರೆ ಮತ್ತಷ್ಟು ಸಮಸ್ಯೆಗಳು ಉದ್ಭವವಾಗುವ ಸಾಧ್ಯತೆ ಇದೆ. ಮಳೆಗಾಲ ಪೂರ್ವ ಈ ಕೆಲಸ ನಗರಸಭೆ ಮಾಡಿದ್ದರೆ ಮನೆಗಳಿಗೆ ಕೊಳಚೆ ನೀರು ಹರಿದು ಬರುತ್ತಿರಲಿಲ್ಲ. ನಗರಸಭೆಯ ನಿರ್ಲಕ್ಷ ಧೋರಣೆ ಈಗ ನಾಗರಿಕರು ಅನುಭವಿಸುವಂತಾಗಿದೆ. ಮಳೆ ಹೆಚ್ಚಾದಂತೆ ಇಲ್ಲಿರುವ ಮನೆ ಹಾಗೂ ಅಂಗಡಿಗಳ ಮಾಲೀಕರು ಆತಂಕಕ್ಕೊಳಗಾಗಿದ್ದಾರೆ.