ದಸರಾ ವೇಳೆಗೆ ರಾಜ್ಯ ಸರ್ಕಾರ ಪತನ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲವೇ ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದಾರೆ, ದಸರಾ ವೇಳೆಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ ಎಂದು ಮಾಜಿ ಸಚಿವ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ‌.
ನವನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ದಸರಾ ಮುನ್ನವೇ ಸಿಎಂ ರಾಜೀನಾಮ ನೀಡಲಿದ್ದು, ಮಧ್ಯಂತರ ಚುನಾವಣೆ ನಡೆಯೋದು ನಿಶ್ಚಿತ ಎಂದರು.
ಯಾವುದೇ ಕ್ಷಣದಲ್ಲಿ ಸರ್ಕಾರ ಪತನವಾಗಲಿದೆ. ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕಾಂಗ್ರೆಸ್ಸಿನವರೇ ಕೆಡವಿದ್ದರು, ಈ ಬಾರಿಯೂ ಕೈ ನಾಯಕರಿಂದಲೇ ಸರ್ಕಾರ ಪತನವಾಗಲಿದೆ ಎಂದರು.
ಸಹಕಾರ ಸಚಿವ ರಾಜಣ್ಣ ಕೂಡ ರಾಜ್ಯದಲ್ಲಿ‌ ಕ್ರಾಂತಿ ಆಗಲಿದ್ದಾರೆ. ಆ ಮಾತಿನ ಅರ್ಥ ಕೇಳಿದರೆ ಸರ್ಕಾರ ಪತನವಾಗಲಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸುವ ದಿನ ದೂರವಿಲ್ಲ ಎಂದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅವರದೇ ಶಾಸಕರು. ಸ್ವತಃ ಸಿಎಂ‌ ಸಿದ್ದರಾಮಯ್ಯ ಅವರೇ ಹಲವು‌ ಪ್ರಕರಣಗಳಲ್ಲಿ ಭಾಗಿಯಾಗುರುವ ಆರೋಪವಿದೆ. ವಸತಿ ಇಲಾಖೆ, ಅಬಕಾರಿ‌ ಇಲಾಖೆ, ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ವಾಲ್ಮೀಕಿ ಹಗರಣದಲ್ಲಿ ಸಂಬಂಧಪಟ್ಟ ಮಂತ್ರಿ ಜೈಲಿಗೆ ಹೋಗಿ ಬಂದಿದ್ದಾರೆ. ವಸತಿ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಶಾಸಕರಾದ ಬಿ.ಆರ್.ಪಾಟೀಲ, ಬೀಳೂರು ಗೋಪಾಲಕೃಷ್ಣ ಅವರೇ ದೂರಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ನವೆಂಬರ್‌ ಆದಮೇಲೆ ಬದಲಾವಣೆ, ದಸರಾ ಆದಮೇಲೆ ಸಿಎಂ ಬದಲಾಗೋದು ಖಚಿತ. ಮೈಸೂರಿನ ದಸರಾ ಉತ್ಸವಕ್ಕಿಂತಲೂ ಮುಂಚೆ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಂಡು ನೀರಿನಿಂದ ಹೊರಬಂದ ಮೀನಿನಂತೆ ಆಗಲಿದ್ದಾರೆ ಎಂದರು.
ಈಗ ಅಧಿಕಾರ ಹಸ್ತಾಂತರದ ಟ್ರೆಂಡ್ ನಡೆದಿದೆ. ಸಿದ್ದರಾಮಯ್ಯ ಅವರು ಸುಲಭವಾಗಿ ಸ್ಥಾನ ಬಿಟ್ಟುಕೊಡವರಲ್ಲ. ಆಗ ಸರ್ಕಾರ ಬಿದ್ದು ಮಧ್ಯಂತರ ಚುನಾವಣೆ ಆಗಲಿದೆ ಎಂದು ವಿವರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚರ್ಚೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೂ ಒಂದೂವರೆ ವರ್ಷ ವಿಜಯೇಂದ್ರ ಅವರಿಗೆ ಸಮಯ ಇದೆ ಎಂದರು.
ವಿಪಕ್ಷ ನಾಯಕ ಸ್ಥಾನ ಬದಲಾವಣೆ ವಿಚಾರಕ್ಕೆ ಉತ್ತರಿಸಿದ ಅವರು ಅಶೋಕ ಅವರು ಸಕ್ರಿಯವಾಗಿ ಸರ್ಕಾರದ ವಿರುದ್ಧ ಚಾಟಿ ಬೀಸುತ್ತಿದ್ದಾರೆ. ಆಡಳಿತದಲ್ಲಿ ಇರುವವರಿಗೆ ಅಧಿಕಾರಿಗಳ ಬಗ್ಗೆ ಗೌರವವಿಲ್ಲ, ಬೂಟುಗಾಲಲ್ಲಿ ಒದೆಯುತ್ತಿದ್ದಾರೆ‌ ಬಿಹಾರ ಚುನಾವಣೆಗಾಗಿ ಇಲ್ಲಿ ಲೂಟಿ ಮಾಡ್ತಿದ್ದಾರೆ ಎಂದರು.
ಸಂವಿಧಾನದಲ್ಲಿರುವ ಸೆಕ್ಯೂಲರ್, ಸಮಾಜವಾದಿ ಶಬ್ದ ತೆಗೆಯಬೇಕೆಂಬ ಆರ್‌ಎಸ್ಎಸ್‌ನ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಸಮರ್ಥಿಸಿಕೊಂಡ ರಾಮುಲು, ಆ ಎರಡೂ ಶಬ್ಧ ‌ಮೂಲ ಸಂವಿಧಾನದಲ್ಲಿ ಇರಲಿಲ್ಲ. ಈ ಬಗ್ಗೆ ಕಾಂಗ್ರೆಸ್ಸಿನವರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಜನಾರ್ಧನ ರೆಡ್ಡಿ ಜತೆಗಿನ ಸಂಬಂಧದ ಬಗ್ಗೆ ಉತ್ತರಿಸಿದ ಅವರು, ನಾನು ಯಾವುದನ್ನೂ ವೈಯಕ್ತಿಕವಾಗಿ ಪಡೆಯುವುದಿಲ್ಲ, ಎಲ್ಲವೂ ಸರಿ ಇದೆ. ನಾವಿಬ್ಬರೂ ಒಟ್ಟಾಗಿ ಇರುವುದ‌್ನು ನೋಡಲಿದ್ದೀರಿ. ಈ ಬಾರಿ ದಲಿತ, ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿ ಬಿಜೆಪಿಗೆ ತಂದು ಪಕ್ಷವನ್ನು ಅಧಿಕಾರಕ್ಕೆ ತರೋದೆ ನಮ್ಮ ಗುರಿ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ರಾಜು ನಾಯ್ಕರ, ಲಕ್ಷ್ಮೀನಾರಾಯಣ ಕಾಸಟ್ ಮತ್ತಿತರರು ಇದ್ದರು.