ಕಲಬುರಗಿ: ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ದಲಿತ ಸಿಎಂ ಕೂಗು ನಿಂತಿದೆ. ಚುನಾವಣೆ ಆದ ಮೇಲೆ ನೋಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ದಲಿತ ಸಿಎಂ ಕೂಗು ಕೇಳಿ ಬಂದಿಲ್ಲ. ೨೦೨೮ರ ಚುನಾವಣೆಯಲ್ಲಿ ಅದರ ಬಗ್ಗೆ ಗಂಭೀರ ಚರ್ಚೆ ಮಾಡೋಣವೆಂದು ತಿಳಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆ ಆಗುತ್ತಾರೆ ಎಂಬ ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆಗೂ ನಮ್ಮಗೂ ಸಂಬಂಧ ಇಲ್ಲ. ಅವರು ನಮ್ಮ ಪಕ್ಷದವರಲ್ಲ. ನಮ್ಮ ಪಕ್ಷದವರು ಹೇಳಿದರೆ ಅದಕ್ಕೆ ರಿಯಾಕ್ಟ್ ಮಾಡಬಹುದು ಎಂದರು.
ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಇಲ್ಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಕಳೆದ ೨ ವರ್ಷಗಳಿಂದ ಅವರು ಇದನ್ನೇ ಹೇಳುತ್ತಿದ್ದಾರೆ. ಇನ್ನೂ ೩ ವರ್ಷ ಬಿಜೆಪಿಯವರು ಗ್ಯಾರಂಟಿಯಿಂದ ಅಭಿವೃದ್ಧಿ ಇಲ್ಲವೆಂದೇ ಹೇಳುತ್ತಾರೆ. ಆದರೆ ಗ್ಯಾರಂಟಿ ಯೋಜನೆಗಳಿಂದ ಯಾವ ಅಭಿವೃದ್ಧಿ ಕಾರ್ಯಗಳೂ ನಿಂತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಸರ್ಕಾರಿ ಇಲಾಖೆಗಳಿಗೆ ಅನುದಾನವೇ ಇರಲಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲ ಇಲಾಖೆಗಳಿಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಕೇಂದ್ರಕ್ಕೆ ನಾವು ೨ ಲಕ್ಷ ಕೋಟಿ ಜಿಎಸ್‌ಟಿ ಹಣ ಕೊಡುತ್ತೇವೆ, ಅದರ ಅರ್ಧ ಹಣವಾದರೂ ಕೇಂದ್ರ ಸರ್ಕಾರ ನಮಗೆ ಕೊಡಬೇಕು. ಸದ್ಯ ೩೬ ಸಾವಿರ ಕೋಟಿ ಜಿಎಸ್‌ಟಿ ಹಣ ಮಾತ್ರ ನಮಗೆ ಕೊಟ್ಟಿದ್ದಾರೆ. ನಮ್ಮ ತೆರಿಗೆ ಹಣವನ್ನು ಯಮುನಾ, ಗಂಗಾ ಹೈವೆ ಎಕ್ಸಪ್ರೆಸ್‌ಗೆ ಬಳಕೆ ಮಾಡುತ್ತಿದ್ದಾರೆ. ನಮ್ಮ ತೆರಿಗೆ ಹಣದಿಂದ ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ರಸ್ತೆ ಆಗುತ್ತಿವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.