ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ ಮುಂದು ವರೆದಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ. ಮಣ್ಣಿನ ಜೊತೆಗೆ ಕಲ್ಲುಗಳು ರಸ್ತೆ ಮೇಲೆ ಜರುಗಿ ಬಿದ್ದಿವೆ.
ಆದರೆ, ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಆದರೆ ಗಾಳಿ, ಮಳೆ ಹೆಚ್ಚಾದರೆ ಮತ್ತಷ್ಟು ಭೂಮಿ ಕುಸಿಯುವ ಸಾಧ್ಯತೆ ಎದುರಾಗಿದೆ. ಅಲ್ಲದೇ ವಾರಂತ್ಯವಾದ ಕಾರಣ ಸಹಜವಾಗಿ ಸಾವಿರಾರು ಪ್ರವಾಸಿಗರು ಗಿರಿ ಪ್ರದೇಶದತ್ತ ಮುಖ ಮಾಡುತ್ತಾರೆ. ಹೀಗಾಗಿ ಗಿರಿ ರಸ್ತೆಯಲ್ಲಿ ಒತ್ತಡವು ಹೆಚ್ಚಾಗುವುದರಿಂದ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಿದೆ.
ಜಿಲ್ಲೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಆದರೆ ನಿನ್ನೆ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅಷ್ಟಾಗಿ ಇಲ್ಲದಿದ್ದರೂ ಸಾಧಾರಣ ಮಳೆಯಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರಗಳಿಗೆ ಎರಡು ದಿನ ರಜೆ ಘೋಷಣೆ ಮಾಡಿತ್ತು.