ಬೆಂಗಳೂರು: ನಗರದಲ್ಲಿ ಮಹಿಳೆಯೊಬ್ಬರ ಮೃತ ದೇಹವು ಕಸದ ಗಾಡಿಯಲ್ಲಿ ಪತ್ತೆಯಾಗಿದೆ. ಗೃಹ ಇಲಾಖೆ, ಪೊಲೀಸ್ ವ್ಯವಸ್ಥೆಯ ಭಯವೇ ಇಲ್ಲದೆ ಮಹಿಳೆಯರ ಕೊಲೆಯಾಗುತ್ತಿರುವುದು ಗೃಹ ಇಲಾಖೆಯ ವೈಫಲ್ಯ ತೋರಿಸುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಮಾಜಘಾತುಕರಿಗೆ, ದರೋಡೆಕೋರರಿಗೆ, ಕೊಲೆಗಡುಕರಿಗೆ ನಡುಕ ಸೃಷ್ಟಿಸಬೇಕಾಗಿದ್ದ ಗೃಹ ಇಲಾಖೆ ದಿಕ್ಕು ದೆಸೆ ಇಲ್ಲದೆ ಅನಾಥವಾಗಿದೆ. ದಕ್ಷ ಅಧಿಕಾರಿಗಳ ಕೈಗಳನ್ನು ಇಲಾಖೆ ಕಟ್ಟಿಹಾಕಿದೆ. ಬೇಹುಗಾರಿಕೆ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಖುದ್ದು ಮುಖ್ಯ ಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಕುಸಿದಿದ್ದರೂ ನಿರ್ಲಿಪ್ತತೆಯಿಂದ, ಏನೂ ಆಗೇ ಇಲ್ಲದಂತೆ ವರ್ತಿಸುವ ಗೃಹ ಮಂತ್ರಿಗಳು ರಾಜೀನಾಮೆ ನೀಡಲಿ. ಹೊಗಳು ಭಟ್ಟರನ್ನು, ಇಲಾಖೆಯಲ್ಲಿ ನಿಷ್ಕ್ರಿಯವಾಗಿರುವ ಅಧಿಕಾರಿಗಳನ್ನು ಬಿಟ್ಟು ದಕ್ಷ ಅಧಿಕಾರಿಗಳಿಗೆ ಹುದ್ದೆ ನೀಡಲಿ ಎಂದಿದ್ದಾರೆ.