ತ್ವರಿತವಾಗಿ ಕಾಯಿಲೆ ಪತ್ತೆಹಚ್ಚಿ ಆರೋಗ್ಯವಂತ ಕಿಡ್ನಿ ಹೊಂದಿ

(ಪ್ರತೀ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರದಂದು ವಿಶ್ವದಾದ್ಯಂತ ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತದೆ. ತನ್ನಿಮಿತ್ತ ಈ ಲೇಖನ.)
ಡಾ|| ವಿನೋದ ಜಿ. ಕುಲಕರ್ಣಿ, ಹುಬ್ಬಳ್ಳಿ
ಮನಸ್ಸಿಗೂ ಮೂತ್ರಪಿಂಡಗಳಿಗೂ ಏನು ಸಂಬಂಧ? ಎತ್ತಣ ಮಾಮರ ಎತ್ತಣ ಕೋಗಿಲೆ' ಅಂತ ಅನೇಕರು ಪ್ರಶ್ನೆ ಕೇಳಿ ಚಕಿತಪಡಿಸುತ್ತಾರೆ. ಹೌದು! ಕಿಡ್ನಿ ಕಾಯಿಲೆ ತೀವ್ರವಾದಾಗ, ಯುರಿಮಿಯಾ ಎಂಬ ಸಂದಿಗ್ಧ ಪರಿಸ್ಥಿತಿಯುಂಟಾಗಿ ರೋಗಿ ವಿಚಿತ್ರ ವರ್ತನೆಯಲ್ಲಿ ತೊಡಗುತ್ತಾನೆ. ಹತ್ತಿರದ ಸಂಬಂಧಿಕರು ಬಂದರೆ,ನೀನು ಯಾರು? ಇದು ಯಾವ ಊರು? ನನ್ನನ್ನೇಕೆ ಇಲ್ಲಿಗೆ ಕರೆತಂದಿದ್ದೀರಿ? ಅವರು ಬಂದರು, ನನ್ನನ್ನು ಕೊಲ್ಲಲು ಅತೀ ಚೂಪಾದ ಚಾಕುವನ್ನೇ ತಂದಿದ್ದಾರೆ’ – ಹೀಗೆ ಅರೆಹುಚ್ಚನಂತೆ ಜೋರಾಗಿ ಒದರಿ ಎಲ್ಲರನ್ನೂ ದಿಗ್ಭ್ರಾಂತಗೊಳಿಸಿದನು. ಆದ್ದರಿಂದಲೇ ಈ ದಿನ ಹೆಚ್ಚು ರೋಗಿಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವುದು ಸಮಾಜದಲ್ಲಿ ನೈತಿಕ ಜವಾಬ್ದಾರಿ ಹೊಂದಿದವರ ಆದ್ಯ ಕರ್ತವ್ಯ.
ಈ ವರ್ಷದ ಘೋಷಣಾವಾಕ್ಯ ಹೀಗಿದೆ; `ಆರೋಗ್ಯವಂತ ಕಿಡ್ನಿ ಹೊಂದಲು, ಅದರ ಕಾಯಿಲೆಯನ್ನು ತ್ವರಿತವಾಗಿ ಪತ್ತೆಹಚ್ಚಲು ಒತ್ತುಕೊಡಿ.’ ಭಗವಂತ ಎಲ್ಲರಿಗೂ ಅನೇಕ ಅಂಗಾಂಗಗಳನ್ನು ಎರಡೆರಡಾಗಿ ದಯಪಾಲಿಸಿದ್ದಾನೆ. ಉದಾ: ಎರಡು ಕಣ್ಣು, ಎರಡು ಕಿವಿ, ಎರಡು ಕೈ, ಎರಡು ಕಾಲು. ಹೀಗೆಯೇ ನಮಗೆ ಭಗವಂತ ಇಟ್ಟು ಕಳಿಸಿದ್ದು ಎರಡು ಮೂತ್ರಪಿಂಡಗಳನ್ನು. ಇದು ಆರಂಭಗೊಂಡಿದ್ದು ೨೦೦೬ರಿಂದ. ಕಾರಣ ಏನು? ಕಿಡ್ನಿಗಳು ಕೈಕೊಡಲು ಅನೇಕ ಕಾರಣಗಳುಂಟು.
೧) ಸಕ್ಕರೆ ರೋಗ, ೨) ಅಧಿಕ ರಕ್ತದೊತ್ತಡ (ಬ್ಲಡ ಪ್ರೆಷರ್), ೩) ಪಾಲಿನೆಂಕ್ ಕಿಡ್ನಿ ರೋಗ, ೪) ಏರುಪೇರಿನ ಜೀವನಶೈಲಿ, ೫) ತಂಬಾಕು ಸೇವನೆ, ೬) ಸ್ಟಿರಾಯ್ಡ್ ಅಲ್ಲದ ನೋವು ಉರಿಯೂತ ನಿವಾರಕ ನಿವಾರಕ ಔಷಧಗಳನ್ನು (NSAID) ವೈದ್ಯರ ಸಲಹೆ ಇಲ್ಲದೇನೇ ದೀರ್ಘಕಾಲದ ವರೆಗೆ ಸೇವಿಸುವುದು ಇವೇ ಮುಂತಾದವು.

ಸಿ.ಕೆ.ಡಿ. ಅಂದರೇನು?
ಸಿ.ಕೆ.ಡಿ. (ಕ್ರಾನಿಕ್ ಕಿಡ್ನಿ ಡಿನೇಶಿಯಾ) ಎಂದರೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಎನ್ನಬಹುದು. ಇದರಿಂದ ಮೂತ್ರಪಿಂಡಗಳು ನಿಧಾನವಾಗಿ ನಾಶಹೊಂದಿ ತೀವ್ರ ತರಹದ ಅವಘಡಗಳನ್ನು ಉಂಟುಮಾಡಬಹುದು. ಕಿಡ್ನಿಗಳು ರಕ್ತವನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹಂತಹಂತವಾಗಿ ಕಳೆದುಕೊಳ್ಳುವವು. ಇದರಿಂದ ಶರೀರದಲ್ಲಿ ತ್ಯಾಜ್ಯಗಳು, ದ್ರವಗಳು ಶೇಖರವಾಗಿ ಅನೇಕ ಸಮಸ್ಯೆಗಳು ಎದುರಾಗಿ ರೋಗಿ ಹತಾಶನಾಗಬಲ್ಲ. ಈ ಕಾಯಿಲೆಯನ್ನು ಏಕೆ ತ್ವರಿತವಾಗಿ ಪತ್ತೆ ಹಚ್ಚಬೇಕು? ಉತ್ತರ ಬಹಳ ಸರಳ. ಪ್ರಾರಂಭಿಕ ಹಂತದಲ್ಲಿ ಸಿ.ಕೆ.ಡಿ. ಒಂದಿಷ್ಟೂ ಲಕ್ಷಣಗಳನ್ನು ತೋರಿಸುವುದಿಲ್ಲ. ಮಧುಮೇಹ, ಬ್ಲಡ್ ಪ್ರೆಷರ್ ಹೊಂದಿದ ವ್ಯಕ್ತಿಗಳಿಗೆ ತನ್ನಲ್ಲಿ ಸಿ.ಕೆ.ಡಿ. ರೋಗ ಅರಂಭವಾಗಿದೆ ಎಂದು ಮೊದಲು ಒಂದಿನಿತೂ ಗೊತ್ತಾಗುವದಿಲ್ಲ. ಉದಾ: ಮನೆಯಲ್ಲಿಯ ಗ್ಯಾಸ್ ಸಿಲಿಂಡರ್‌ನಲ್ಲಿ ಇನ್ನೂ ಎಷ್ಟು ಗ್ಯಾಸ್ ಇದೆಯೆಂದು ಮೊದಲೇ ಗೊತ್ತಿರುವುದಿಲ್ಲ. ಸಿಲಿಂಡರ್ ಸಂಪೂರ್ಣ ಖಾಲಿ ಆದಾಗಲೇ ತಿಳಿಯುವುದು. ಖಾಲಿಯಾದಾಗ ಸಿಲಿಂಡರ್ ತರುವ ಹಾಗೆ, ಕಿಡ್ನಿ ಕಾಯಿಲೆಯಲ್ಲಿ ಹೊಸ ಕಿಡ್ನಿ ತರುವುದೆಂದರೆ ಮೂತ್ರಪಿಂಡದ ಕಸಿ ಮಾತ್ರ. ಇದೂ ದುಬಾರಿ ಚಿಕಿತ್ಸೆ. ವೇದನೆ ಇಲ್ಲದೆ ತ್ವರಿತವಾಗಿ ಹೊಸ ಮೂತ್ರಪಿಂಡ ಅಳವಡಿಸುವುದು ಕಷ್ಟಸಾಧ್ಯ.
ಎರಡೂ ಕಿಡ್ನಿಗಳು ಅತ್ಯಂತ ಆರೋಗ್ಯಪೂರ್ಣವಾಗಿ ಇರಲೇಬೇಕೆಂದು ಕಡ್ಡಾಯ ನಿಯಮ ಇಲ್ಲ. ಒಂದೇ ಕಣ್ಣು, ಕಿವಿ, ಕೈಕಾಲು ಇದ್ದವರು ಬದುಕುತ್ತಿಲ್ಲವೇ! ಹಾಗೆಯೇ ದೇಹದಲ್ಲಿ ಒಂದು ಕಿಡ್ನಿ ಚೆನ್ನಾಗಿದ್ದರೂ ನಡೆದೀತು ಎಂದು ಮೂತ್ರಪಿಂಡ ತಜ್ಞರು ಹೇಳುತ್ತಾರೆ. ಎರಡೂ ಕಿಡ್ನಿಗಳು ತೀವ್ರ ತೆರನಾಗಿ ವೈಫಲ್ಯ ಹೊಂದಿದರೆ, ಅಂತಿಮ ಹಂತದಲ್ಲಿ ಮೂತ್ರಪಿಂಡದ ಕ್ರಿಯಾತ್ಮಕ ಘಟಕಗಳು ಸಾಕಷ್ಟು ಹಾನಿಗೀಡಾಗಿ ಸಾವಿಗೆ ಕಾರಣವಾಗಬಹುದು. ವಿಶೇಷವಾಗಿ ಡಯಾಬಿಟಿಸ್, ಬ್ಲಡ್ ಪ್ರೆಷರ್ ರೋಗ ಹೊಂದಿದವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುವರು.
ದೀರ್ಘಕಾಲದ ಕಿಡ್ನಿ ವೈಫಲ್ಯ ಆರಂಭದ ಹಂತದಲ್ಲಿ ಗೊತ್ತಾಗದಿರದು. ಆದ್ದರಿಂದಲೇ ನಿಯತವಾಗಿ ವರ್ಷದಲ್ಲಿ ಒಂದು ಬಾರಿಯಾದರೂ ವೈದ್ಯಕೀಯ ಪರೀಕ್ಷೆ ಅಥವಾ ಸ್ಕ್ಯಾನಿಂಗ್ ಮಾಡಿಸಿಕೊಳ್ಳಿ ಎಂಬುದಾಗಿ ವೈದ್ಯ ಸಮುದಾಯ ಸಾರ್ವಜನಿಕರಿಗೆ ಪದೇಪದೇ ಹೇಳುವುದು. ಕಾಯಿಲೆ ಉಲ್ಬಣಗೊಂಡಂತೆ ರೋಗಿಗೆ ನೋಟ ಮಸುಕಾಗುವುದು ಸಾಮಾನ್ಯ. ಇದಕ್ಕೆ ಕಾರಣ ಸಿ.ಕೆ.ಡಿ.ಯಿಂದ ಸಂಭವಿಸುವ ರಕ್ತಹೀನತೆ.
ಅನೀಮಿಯಾ ಎಂದು ವೈದ್ಯರ ಬಳಿ ಸಲಹೆಗೆ ಬಂದಿದ್ದರಿಂದಲೇ ಸಿ.ಕೆ.ಡಿ. ಕಾಯಿಲೆಯನ್ನು ಪತ್ತೆಹಚ್ಚಿದ್ದಾರೆ. ಹಲವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ, ವೈದ್ಯರ ಬಳಿ ತ್ವರಿತವಾಗಿ, ಗಾಬರಿಯಿಂದ ಓಡಿಬರುವರು. ಇದಕ್ಕೆ ಕಾರಣಗಳೆಂದರೆ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಟಾಕ್ಸಿನ್(ವಿಷಪದಾರ್ಥಗಳು) ಶೇಖರವಾದಾಗ ಆಗುವ ರಕ್ತಹೀನತೆಯೇ ಮೊದಲಾದವು.

ಸಿ.ಕೆ.ಡಿ.ಯಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು
೧) ತುರಿಕೆ, ೨) ಜೀವರಾಸಾಯನಿಕ ಅಸಹಜತೆಗಳಿಂದ ರಾತ್ರಿಯಲ್ಲಿ ಉದ್ಭವಿಸಬಲ್ಲ ಸೆಳೆತ, ೩) ಅರಿವಿನ ಬದಲಾವಣೆ-ಕೌಶಲಗಳು ನಾಶವಾಗುವುದು, ೪) ಹಸಿವಾಗದಿರುವಿಕೆ, ವಾಂತಿ, ೫) ತೀವ್ರ ತೆರನಾದ ಉಸಿರಾಟ, ೬) ಪಾಲಿಕ್ಯೂರಿಯಾ-ಸಾಂದ್ರತೆಯ ದೌರ್ಬಲ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ ಆಲಿಗೂರಿಕ್-ಮೂತ್ರದ ಪ್ರಮಾಣ ತೀವ್ರವಾಗಿ ಕುಂಠಿತಗೊಳ್ಳುವುದು. ರಾತ್ರಿಯಲ್ಲಿ ಮೂತ್ರ ವಿಸರ್ಜನೆ. ಮೂತ್ರಪರೀಕ್ಷೆ ಮಾಡಿದಾಗ ಅದರಲ್ಲಿ ಪ್ರೋಟಿನ್ ಸೋರಿಹೋಗುತ್ತಿದೆ ಎಂಬ ಅಂಶ ಬೆಳಕಿಗೆ ಬರುವುದು, ೭) ಮೂತ್ರದಲ್ಲಿ ರಕ್ತ ವಿಸರ್ಜನೆ, ೮) ಮೂತ್ರಪಿಂಡಗಳಲ್ಲಿ ಎಲ್ಲೆ ಮೀರಿ ಸೋಡಿಯಂ ಅಂಶ(ಉಪ್ಪಿನ ಅಂಶ ಶೇಖರಣೆಗೊಂಡು, ರೋಗಿಯ ಕೈ ಕಾಲುಗಳಲ್ಲಿ ಪಾದಗಳಲ್ಲಿ ವಾತ. ದೀರ್ಘಕಾಲದಿಂದ ಬ್ಲಡ್ ಪ್ರೆಷರ್, ರಕ್ತದ ಡಯಾಬಿಟಿಸ್ ಹೊಂದಿದ ರೋಗಿಗಳಿಗೆ ಇದೇ ಎಚ್ಚರಿಕೆ.)
ಪ್ರತಿ ವರ್ಷ ಮೂತ್ರದಲ್ಲಿ ಅಲ್ಬುಮಿನ್ ಹೆಚ್ಚಾಗಿದೆಯೇ ಎಂಬ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಿ. ಆರಂಭಿಕ ಹಂತದಲ್ಲೇ ಸಿಕೆಡಿ ಪತ್ತೆ ಹಚ್ಚಬಹುದು. ಹೆಚ್ಐವಿ, ಯಕೃತ್ತಿನ ರೋಗ, ಹಲವು ಔಷಧೀಯ ದುಷ್ಪರಿಣಾಮಗಳಿಂದ ಕ್ಯಾನ್ಸರ್‌ಗೆ ಪಡೆದಂತೆ ಕೀಮೋ ಥೆರಫಿ ಇವು ಕೂಡ ಸಿಕೆಡಿಯನ್ನು ಪರೀಕ್ಷಿಸಬಲ್ಲವು. ಇದು ಅನುವಂಶಿಕವೇ? ಕುಟುಂಬದಲ್ಲಿ ಯಾರಿಗಾದರೂ ಸಿಕೆಡಿ ಕಾಯಿಲೆ ಇದ್ದರೆ ಮುಂದಿನ ಪೀಳಿಗೆಯೂ ಆರಂಭಿಕ ಹಂತದಲ್ಲಿ ಸ್ಕ್ಯಾನಿಂಗ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
ತಡೆಗಟ್ಟುವುದು ಹೇಗೆ? ೧) ದೈಹಿಕ ವ್ಯಾಯಾಮ, ೨) ಮಂದಾಸನ ವ್ಯಾಯಾಮ-ಇವೆರಡೂ ಬಹಳ ಮುಖ್ಯ. ಇವುಗಳನ್ನು ನಿಮ್ಮ ದೇಹ-ಮನದಿಂದ ಒಗ್ಗೂಡಿಸಿ. ಇದಕ್ಕೆ ಪರಿಹಾರ ಇದೆಯೇ? ಖಂಡಿತ ಇದೆ. ಒಂದಿನಿತೂ ನಿರಾಶೆ ಬೇಡ. ಡಯಾಬಿಟಿಸ್, ಬ್ಲಡ್ ಪ್ರೆಷರ್ ತಗುಲದಂತೆ ಎಚ್ಚರ ವಹಿಸಿ. ಸರಳ ಜೀವನಶೈಲಿ ಇರಲಿ. ಆಹಾರದಲ್ಲಿ ಪ್ರೋಟಿನ್ ಪ್ರಮಾಣ ಕಡಿಮೆ ಇರಲಿ. ಹಲವರಿಗೆ ಡಯಾಬಿಟಿಸ್ ಚಿಕಿತ್ಸೆ ಬೇಕಾದೀತು. ಇದರ ಚಿಂತೆ ಬೇಡ. ಈಗ ಸಾಮಾನ್ಯ ತಾಲೂಕುಗಳಲ್ಲಿಯೂ ಇದು ಲಭ್ಯವಿದೆ. ಕಿಡ್ನಿರೋಗದಿಂದ ಬಳಲುವವರೇ, ಎದೆಗುಂದದಿರಿ. ಯೋಗ್ಯ ಚಿಕಿತ್ಸೆ, ದೃಢವಾದ ಮನಸ್ಸು, ಜೀವನಶೈಲಿಯ ಬದಲಾವಣೆಯಿಂದ ಖಂಡಿತವಾಗಿ ಈ ರೋಗವನ್ನು ಸೋಲಿಸಲು ಸಾಧ್ಯವಿದೆ.
(ಲೇಖಕರು ನರ ಹಾಗೂ ಮನೋರೋಗ ತಜ್ಞರು, ವಕೀಲರು, ಪಬ್ಲಿಕ್ ಆ್ಯಕ್ಟಿವಿಸ್ಟ್)