ತುಮಕೂರಿನಲ್ಲಿ ವಿಶ್ವದರ್ಜೆಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಜಮೀನು ಹಸ್ತಾಂತರ

ತುಮಕೂರ: ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕೆಐಎಡಿಬಿ ಮೂಲಕ ಒದಗಿಸುವ 41 ಎಕರೆ ಜಮೀನಿನ ಸ್ವಾಧೀನ ಪತ್ರವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ- ಕೆ.ಎಸ್.ಸಿ.ಎ,ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಹಸ್ತಾಂತರಿಸಿದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕಲ್ಪತರುನಾಡು ತುಮಕೂರು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಇಲ್ಲಿನ ಕ್ರಿಕೆಟ್ ಉತ್ಸಾಹಿಗಳ ನಿರೀಕ್ಷೆಗಳನ್ನು ಪೂರ್ಣಗೊಳಿಸುವ ಸಂಬಂಧ ಇಲ್ಲೊಂದು ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಬೇಕೆಂಬುದು ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ಸಂಬಂಧ ವಸಂತನರಸಾಪುರದಲ್ಲಿನ KIADB ಗೆ ಸೇರಿದ 41 ಎಕರೆ ಜಮೀನಿನ ಸ್ವಾಧೀನ ಪತ್ರವನ್ನು ರಾಜ್ಯ ಕ್ರಿಕೆಟ್ ಸಂಸ್ಥೆ (KSCA)ಗೆ ಸೋಮವಾರ ಹಸ್ತಾಂತರಿಸಿದೆ. ಈ ಯೋಜನೆಯಿಂದ ತುಮಕೂರಿನ ಕ್ರೀಡಾ ಮೂಲಸೌಕರ್ಯ ಹೆಚ್ಚಳವಾಗುವುದರ ಜೊತೆಗೆ, ಯುವ ಪ್ರತಿಭೆಗಳಿಗೆ ಉಜ್ವಲ ಅವಕಾಶಗಳು ಲಭ್ಯವಾಗಲಿದೆ. ರಾಜ್ಯಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವೂ ಲಭ್ಯವಾಗಲಿದೆ ಎಂದಿದ್ದಾರೆ

ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಈಗ ಕೊಟ್ಟಿರುವ ಜಾಗದ ಪಕ್ಕದಲ್ಲೇ ಇರುವ 6.5 ಎಕರೆ ಖರಾಬು ಜಮೀನನ್ನು ಕೆಎಸ್ ಸಿಎ ಗೆ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು. ಅದಕ್ಕೆ ಸ್ಪಂದಿಸಿದ ಸಚಿವರು, ಈ ಮನವಿಯ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ತುಮಕೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳು ಬರಬೇಕಾದ ಅಗತ್ಯವಿದೆ ಎಂದರು.