ಯಾಕೋ ನನ್ನ ದವಾ ಖಾನೆ ಸರಿ ಯಾಗಿ ನಡೆಯುತ್ತಿಲ್ಲ ಎಂದು ಮನಸ್ಸಿಗೆ ಹಚ್ಚಿಕೊಂಡಿದ್ದ ಡಾ. ತಿರ್ಮೂಲಿ ತನ್ನ ಆತ್ಮೀಯ ಗೆಳೆಯ ತಿಗಡೇಸಿಗೆ ಹೇಳಿದ್ದ. ನೀನು ಏನೂ ಕಾಳಜಿ ಮಾಡಬೇಡ ನಾನು ಏನಾದರೂ ಪ್ಲಾನ್ ಮಾಡುತ್ತೇನೆ ಎಂದು ಹೇಳಿದ್ದ ತಿಗಡೇಸಿ ನಾಲ್ಕು ಹಗಲು… ನಾಲ್ಕು ರಾತ್ರಿ ಯೋಚನೆ ಮಾಡಿ ಮಾಡಿ ಕೊನೆಗೆ ಒಂದು ಕನ್ಕ್ಲೂಷನ್‌ಗೆ ಬಂದು… ನೋಡಪಾ ನೀನು ಹೀಗೆ ಮಾಡಿದರೆ ನಿನ್ನ ದವಾಖಾನೆ ತುಂಬಿ ತುಳುಕುತ್ತೆ ಎಂದು ಅಂದ. ಮರುದಿನವೇ ಡಾ. ತಿರ್ಮೂಲಿ ದವಾಖಾನೆ ಮುಂದುಗಡೆ.
ಯಾವುದೇ ಕಾಯಿಲೆ ಇರಲಿ ಇಲ್ಲಿ ಔಷಧಿ ಕೊಡಲಾಗುವುದು ಈ ಔಷಧಿ ತೆಗೆದುಕೊಂಡರೆ ಅತಿ ಬೇಗ ಕಡಿಮೆಯಾಗುವುದು. ಬೇಕಾದರೆ ಪರೀಕ್ಷೆ ಮಾಡಬಹುದು ಯಾವುದೇ ಅನುಮಾನ ಬೇಡ ಎಂದು ಬೋರ್ಡು ಹಾಕಿದ. ಮರುದಿನವೇ ಟೊಪಗಿ ಹಾಕಿಕೊಂಡ ಜನರು ಬರತೊಡಗಿದರು.
ಡಾಕ್ಟರ್ ಸಾಹೇಬರೇ… ನಮ್ ಸಾಹೇಬರು ನಾಲ್ಕು ದಿನದಿಂದ ಯಾಕೋ ಒಂಥರ ಆಡ್ತಾ ಇದಾರೆ. ಅವರು ನಮ್ಮೋರು… ಇವರು ನಮ್ಮೋರು… ಆದರೆ ಅವರು ನಮ್ಮವರಲ್ಲ… ಇವರು ನಮ್ಮವರಲ್ಲ…. ಎಂದು ಅನ್ನುತ್ತಾರೆ. ಅವರನ್ನ ಹೆಚ್ಚಿಗೆ ಲೆಕ್ಕ ಹಚ್ಚು ಅನ್ನುತ್ತಾರೆ ಅಂತಿದಾರೆ ಎಂದು ಹೇಳಿದ. ಓಹೋ ಇದು ಗಾತಿ ಪಣತಿ ಜ್ವರ ಎಂದು… ನಾಲ್ಕು ಮಾತ್ರೆ ಕೊಟ್ಟು ಮುಂಜಾನೆ ಸಂಜೆ ಕೊಡು ಎಂದು ಹೇಳಿದ. ಹೂಂ ಎಂದು ಹೋದವರು ಇನ್ನೂ ಬಂದಿಲ್ಲ. ಲೇವಣ್ಣ.. ಗುಜೇಂದ್ರ… ಗುತ್ನಾಳ. ಅವರೆಲ್ಲರೂ ಏನೇನೋ ಹೇಳಿ ಔಷಧ ತೆಗೆದುಕೊಂಡು ಹೋದವರು ವಾಪಸ್ಸೇ ಬರಲಿಲ್ಲ. ಇದನ್ನೇ ಲಾಭ ಮಾಡಿಕೊಂಡ ಡಾ. ತಿರ್ಮೂಲಿ ನನ್ಕಡೆ ಔಷಧ ತೆಗೆದುಕೊಂಡವರು ಏನೇನಾಗಿದ್ದಾರೆ ಗೊತ್ತಾ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಆದರೆ ತಿಗಡೇಸಿ ಮಾತ್ರ ತಿರ್ಮೂಲಿ ಮಾತ್ರೆ ವೈಕುಂಠ ಯಾತ್ರೆ ಎಂದು ಅನ್ನುತ್ತಿದ್ದಾನೆ.