ತಿರುಕೇಸಿಯ ವೃತ್ತಾಂತ

ತಿರುಕೇಸಿಗೆ ಮಾತನಾಡುವ ಹುಚ್ಚು ಮೊದಲಿನಿಂದಲೂ ಇತ್ತು. ಎಲ್ಲೇ ಕಾರ್ಯಕ್ರಮ ಇರಲಿ, ಕೈಕಾಲು ಹಿಡಿದುಕೊಂಡು ತನ್ನನ್ನು ಅತಿಥಿಯನ್ನಾಗಿ ಮಾಡುವಂತೆ ಗೋಗರೆಯುತ್ತಿದ್ದ. ತನ್ನನ್ನೇ ಅತಿಥಿಯನ್ನಾಗಿ ಕರೆಯುವಂತೆ ಅವರಿವರ ಕಡೆಯಿಂದ ಹೇಳಿಸುತ್ತಿದ್ದ. ಇದಕ್ಕೆ ಮಣಿದು ಸಂಘಟಕರು ತಿರುಕೇಸಿಯನ್ನು ಭಾಷಣಕ್ಕೆ ಕರೆದರೆ ಸಾಕು ಕಾರ್ಯಕ್ರಮಕ್ಕೆ ಬಂದವರು ಸಂಘಟಕರನ್ನು ಹುಡುಕಾಡಿಕೊಂಡು ಹೋಗಿ ಬಯ್ಯುತ್ತಿದ್ದರು. ಯಾಕೆಂದರೆ ತಿರುಕೇಸಿ ಏನು ಮಾತನಾಡುತ್ತಿದ್ದಾನೆ ಎಂದು ಜನರಿಗೆ ಹೋಗಲಿ ಆತನಿಗೂ ಅರ್ಥವಾಗುತ್ತಿರಲಿಲ್ಲ. ಅಷ್ಟಕ್ಕೂ ತಿರುಕೇಸಿ ಯಾಕೆ ಹಾಗೆ ಮಾಡುತ್ತಾನೆ? ಎಂದು ಮೂಲ ಹುಡುಕಲು ತಳವಾರ್ಕಂಟಿಗೆ ವಹಿಸಲಾಯಿತು. ಅಂದಿನಿಂದ ತಳವಾರ್ಕಂಟಿಯು ಆತನ ಎಲ್ಲ ಡಿಟೇಲ್ಸ್ ತೆಗೆದುಕೊಂಡ. ತಿರುಕೇಸಿ ಎಲ್ಲಿ ಜನಿಸಿದ. ಯಾವ ಶಾಲೆಯಲ್ಲಿ ಕಲಿತ? ಯಾವ ಕಾಲೇಜಿನಲ್ಲಿ ಓದಿದ? ಬಾಲ್ಯದಲ್ಲಿ ಏನೇನು ಮಾಡಿದ? ಹೀಗೆ ಎಲ್ಲ ಮಾಹಿತಿಯನ್ನು ಸಂಗ್ರಹಿಸಿಕೊಂಡು ಕಾರ್ಯತತ್ಪರನಾದ. ನೂರಾರು ಮಂದಿಯನ್ನು ಮಾತನಾಡಿಸಿ ತಿರುಕೇಸಿ ಹೇಗೆ ಎತ್ತ ಎಂಬ ಮಾಹಿತಿ ಪಡೆದ. ಚಿಕ್ಕವನಿರುವಾಗ ಮಾಟ ಮಂತ್ರದ ಕಡೆ ತಿರುಕೇಸಿ ಆಕರ್ಷಿತನಾಗಿದ್ದ ಎಂಬ ವಿಷಯವನ್ನು ಕೇಳಿ ಆ ಮಾಟಗಾರರನ್ನು ಭೇಟಿಯಾಗಿ ಆತನ ಸ್ವಭಾವ ಹೇಗೆ ಎಂದು ತಿಳಿದುಕೊಂಡ. ಹಲವಾರು ಮನೋವೈದ್ಯರನ್ನು ಸಂಪರ್ಕಿಸಿ ಈ ಥರದವರು ಹಿಂಗ್ಯಾಕೆ ಎಂದು ಡಿಸ್‌ಕಸ್ ಮಾಡಿದ. ಎಲ್ಲ ಮಾಹಿತಿಗಳು ತಿರುಕೇಸಿಯ ಸ್ವಭಾವ, ಆತ ಇರುವುದರ ಬಗ್ಗೆ ಹೋಲಿಕೆ ಆಗುತ್ತಿರಲಿಲ್ಲ. ಕೊನೆಗೆ ತಿರುಕೇಸಿಯ ದೊಡ್ಡವ್ವನ ಗಂಡನ ಸೊಸೆಯ ಅತ್ತೆಯನ್ನು ಸಂಪರ್ಕಿಸಿದಾಗ… ತಿರುಕೇಸಿ ಚಿಕ್ಕವನಿದ್ದಾಗ ಈ ಊರಿಗೆ ಬಂದಿದ್ದ. ಹುಡುಗರ ಜತೆ ಲಗೋರಿ ಆಡುವಾಗ ಆತನ ತಲೆಗೆ ಚಂಡು ಬಡಿದಿತ್ತು. ಆಗಿನಿಂದ ಹೀಗೆ ಆಗಿದ್ದಾನೆ ಎಂದು ಹೇಳಿದಳು. ಹಾಗೆ ತಿರುಕೇಸಿಯ ವೃತ್ತಾಂತವನ್ನು ಸಂಗ್ರಹಿಸಿದ ತಳವಾರ್ಕಂಟಿಗೆ ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.