ಹೆಚ್ಚು ಮೆಹಂದಿ ಹಾಕಿ ಕೊಂಡು ತನ್ನ ತಲೆಗೂದ ಲನ್ನು ಕೆಂಪಗೆ ಮಾಡಿಕೊಂಡು ಏನೇನರ ಮಾತನಾಡಿಕೊಂಡಿದ್ದ ಟ್ರಂಪೇಸಿ, ತಾಸಿಗೊಂದು ಬಾರಿ ಮುಖ ತೊಳೆದುಕೊಂಡು ಸ್ನೋ ಪೌಡರ್ ಹಚ್ಚಿಕೊಂಡು ಕನ್ನಡಿ ನೋಡಿಕೊಂಡು ನಾನು ಭಾರೀ ಸ್ಮಾರ್ಟು ಎಂದು ಇದ್ದ ರಷಿಯಾ ಪುಟ್ಯಾನ ಮಧ್ಯೆ ಜಗಳ ಶುರುವಾಗಿದೆ. ದಿನ ಬಿಟ್ಟು ದಿನ ರಾತ್ರಿಹೊತ್ತಲ್ಲಿ ಟ್ರಂಪೇಸಿ ಪುಟ್ಯಾನಿಗೆ ಕರೆ ಮಾಡುತ್ತಿದ್ದ ಫೋನೆತ್ತುತ್ತಿದ್ದಂತೆ… ಲೇ ಪುಟ್ಯಾ.. ಏನಲೇ ಲೊಟ್ಯಾ ಎಂದು ಹೇಳುತ್ತಿದ್ದ. ಯರ‍್ರೀ ನೀವು ಅನ್ನುವಷ್ಟರಲ್ಲಿ ಕೊಕಾಸಿ ನಕ್ಕು ಕರೆ ಕಟ್ ಮಾಡುತ್ತಿದ್ದ. ಈ ಫೋನು ಎಲ್ಲಿಂದ ಬಂತು ನೋಡು ಎಂದು ಹಿಂಬಾಲಕರಿಗೆ ಹೇಳಿದರೆ… ಸಾರ್… ಇದು ಇರಪಾಪುರ ಮಾದೇವನ ನಂಬರ್ ಅಂವ ಫೋನ್ ಮಾಡ್ಯಾನ್ರೀ ಎಂದು ಹೇಳುತ್ತಿದ್ದರು. ಫೋನಿನ ಕಾಟ ಜಾಸ್ತಿಯಾದಾಗ ಪುಟ್ಯಾ… ವಾಪಸ್ ಅದೇ ನಂಬರ್‌ಗೆ ಕಾಲ್ ಮಾಡುತ್ತಿದ್ದ ಟ್ರಂಪೇಸಿ ಹಲೋ ಅನ್ನುತ್ತಿದ್ದಂತೆ… ನೀನು ಹಾವು ಹಿಡಿಯುವವನು ತಾನೆ? ಬೇಗ ಬಾರಲೇ ಎಂದು ಕೇಳುತ್ತಿದ್ದ. ಕಕ್ಕಾಬಿಕ್ಕಿಯಾದ ಟ್ರಂಪೇಸಿ ಈ ಕರೆ ಎಲ್ಲಿಂದ ಬಂದಿದೆ ನೋಡು ಎಂದು ಹಿಂಬಾಲಕರಿಗೆ ಕೇಳಿದರೆ… ಸಾರ್ ನಾವು ಚೆಕ್ ಮಾಡಿದೆವು..ಇದು ಲಾದುಂಚಿಯಿಂದ ಬಂದಿದೆ… ಇದು ಲಾದುಂಚಿ ರಾಜನದೇ ಕೆಲಸ ಇರಬಹುದು ಎಂದು ಹೇಳಿದರು. ಇನ್ನೊಂದು ಸಲ ಪುಟ್ಯಾ… ಏಯ್ ಟ್ರಂಪೇಸಿ ಆ ಕೆಂಪ್ಯಾ ಜೆಲನ್ಸಿಗೆ ಏನೇನರ ಹೇಳಿ ಕೊಡ್ತಿಯಾ? ನೋಡು ನಿನ್ನ ಎಂದು ಅನ್ನುತ್ತಿದ್ದ. ಅವತ್ತೇ ರಾತ್ರಿ ವಾಪಸ್ ಪುಟ್ಯಾಗೆ ಕರೆ ಮಾಡಿದ ಟ್ರಂಪೇಸಿ… ಮುಗಿತಲೇ ನಿಂದು ಇನ್ನ ಮುಗೀತು ಅನ್ನುತ್ತಿದ್ದ. ಈ ಇಬ್ಬರ ಜಗಳ ಹೀಗೆ ಮುಂದುವರಿದರೆ ಬಡಿದಾಡಿಕೊಂಡು ಸಾಯುತ್ತವೆ ಎಂದು ಚೀನಾ ಜಿಂಗ್ಯಾ… ಇಬ್ಬರಿಗೂ ಕರೆ ಮಾಡಿ ಏಯ್ ಗುದ್ಯಾಡಬೇಡಿ ಎಂದು ಕಿವಿಮಾತು ಹೇಳುತ್ತಿದ್ದ. ಆದರೆ ಇವರು ಯಾರ ಮಾತೂ ಕೇಳುತ್ತಿರಲಿಲ್ಲ. ಜಿಂಗ್ಯಾ ಕರೆ ಸೋದಿಮಾಮೋರಿಗೆ ಕರೆ ಮಾಡಿ ಅವರೆಡು ಗುದ್ದಾಡ್ತವೆ.. ಯಾಕೆ ಅಂತ ಗೊತ್ತಾಗುತ್ತಿಲ್ಲ ನೀನೇ ಪತ್ತೆ ಹಚ್ಚಿ ಹೇಳು ಮಾಮಾ ಅಂದ ನೋಡನ ಬುಡು ಅಂದ ಸೋದಿಮಾಮಾ.. ನೋಡಿ ನೀಟಾಗಿ ಎನ್‌ಕ್ವಯರಿ ಮಾಡಿ ಯಾರು ಕರಕೊಂಡು ಬನ್ನಿ ಎಂದರು. ಮರುದಿನವೇ ಸೆಕ್ಯುರಿಟಿಯವರು ತಿಗಡೇಸಿಯನ್ನು ಹಿಡಿದುಕೊಂಡು ಬಂದರು. ಯಾಕಪ್ಪಾ ಹೀಗೆ ಮಾಡ್ತಿದಿಯ ಎಂದು ಡೈರೆಕ್ಟಾಗಿ ಸೋದಿಮಾಮೋರು ಕೇಳಿದರು. ಹುಳ್ಳಗೇ ಮುಖ ಮಾಡಿದ ತಿಗಡೇಸಿ… ಏನ್ ಮಾಡೋದು ಸಾಹೇಬ್ರೆ ಇಬ್ಬರೂ ಮಳ್ಳಗಳು ನನಗೆ ಹಗಲು-ರಾತ್ರಿ ಫೋನ್ ಮಾಡಿ ಪರಸ್ಪರ ಹೊಗಳಿಕೊಳ್ಳುತ್ತಿದ್ದರು. ನನಗೂ ಸಾಕಾಗಿ ಕೊನೆಗೆ ಟ್ರಂಪೇಸಿಗೆ ಪುಟ್ಯಾನ ಮೇಲೆ.. ಪುಟ್ಯಾನಿಗೆ ಟ್ರಂಪೇಸಿ ಮೇಲೆ ಚಾಡಿ ಹೇಳಿದ್ದೆ ಈಗ ಅವರವರೇ ಫೋನ್ ಮಾಡಿಕೊಂಡು ಗುದ್ದಾಡುತ್ತಿವೆ… ನಾನು ಅರಾಮಿದೀನಿ ನೋಡ್ರಿ ಎಂದು ಹೇಳಿದ ತಿಗಡೇಸಿ.