ಹಾಸನ: ಯುವತಿಯೊಬ್ಬಳು ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದಿರುವ ಘಟನೆ ನಡೆದಿದೆ.
ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು, ಹಾಸನ ತಾಲ್ಲೂಕಿನ, ಬೂವನಹಳ್ಳಿ ಗ್ರಾಮದ ಯುವತಿ ಹಾಗೂ ಆಲೂರು ತಾಲ್ಲೂಕಿನ ಯುವಕನ ಜೊತೆ ಇಂದು ಮದುವೆ ನಿಶ್ಚಯವಾಗಿತ್ತು. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಯುವತಿಗೆ ಕರೆಯೊಂದು ಬಂದಿದೆ. ಆ ಕೂಡಲೇ ಮದುವೆ ಬೇಡ ಎಂದು ಯುವತಿ ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಆದ್ರೆ ಯುವತಿ ಹೀಗೆ ಮಾಡಿದಕ್ಕೆ ಒಂದು ಕಾರಣ ಕೂಡ ಇದೆ. ಅದು ಏನೆಂದರೆ ಯುವತಿ ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದಳಂತೆ. ಹೀಗಾಗಿ ತಾಳಿ ಕಟ್ಟಲು ಬಂದ ವರನ ಹತ್ತಿರ ನನಗೆ ಈ ಮದುವೆ ಬೇಡ ಎಂದು ಹಠ ಹಿಡಿದಿದ್ದಾಳೆ. ಇನ್ನೂ, ಮದುವೆ ಬೇಡವೇ ಬೇಡ ಎಂದು ಹಠ ಹಿಡಿದ ಯುವತಿಯನ್ನು ನೋಡಿದ ವರ ನನಗೂ ಬೇಡ ಅಂತ ಹೇಳಿದ್ದಾರೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಕಣ್ಣೀರಿಟ್ಟಿದ್ದಾರೆ. ಆಗ ಬಡಾವಣೆ ಹಾಗೂ ನಗರ ಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿದ್ದಾರೆ.