ತಾನೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ಕೋತಿ..!

ಬಾಗಲಕೋಟೆ: ಗುದದ್ವಾರದ ಚಿಕಿತ್ಸೆಗಾಗಿ ಕೋತಿಯೊಂದು ತಾನೇ ಪಶು ಆಸ್ಪತ್ರೆಗೆ ಬಂದು ವೈದ್ಯರಿಗೆ ಕೈ ಸನ್ನೆ ಮೂಲಕ ತೋರಿಸಿ ಚಿಕಿತ್ಸೆ ಪಡೆದಿರುವ ವಿಚಿತ್ರ ಘಟನೆ ಹುನಗುಂದ ತಾಲೂಕಿನ ಗುಡೂರ ಗ್ರಾಮದಲ್ಲಿ ನಡೆದಿದೆ.
ಗುಡೂರ ಎಸ್‌ಸಿ ಗ್ರಾಮದ ಪಶು ಆಸ್ಪತ್ರೆ ವೈದ್ಯ ಜಿ.ಜಿ. ಬಿಲ್ಲೋರ ಅವರ ಬೈಕ್ ಏರಿ ಮಂಗವೊಂದು ಕುಳಿತಿದೆ ಅದನ್ನು ಗಮನಿಸಿ ಅವರು ಅದರ ಬೆನ್ನು ಸವರಿದಾಗ ಗುದದ್ವಾರದ ಕಡೆಗೆ ಕೈ ಮಾಡಿ ತೋರಿಸಿದೆ. ಆಗ ಅಲ್ಲಿ ಹುಳು ಬಿದ್ದಿರುವುದನ್ನು ಗಮನಿಸಿದ ಅವರು ಕೂಡಲೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ವಿಚಿತ್ರ ಎಂದರೆ ಔಷಧಿ ಹಚ್ಚುವಾಗ ಪ್ರಾಣಿಗಳು ದಾಳಿ ಮಾಡುತ್ತವೆ. ಇಲ್ಲವೇ ಕಿರಿಚಾಡುತ್ತವೆ. ಆದರೆ, ಈ ಕೋತಿ ತನಗೆ ಚಿಕಿತ್ಸೆ ಅಗತ್ಯವೆಂಬಂತೆ ವೈದ್ಯರಿಗೆ ಸಹಕಾರ ನೀಡಿ ಚಿಕಿತ್ಸೆ ಪಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.