ಬೆಂಗಳೂರು: ಕರ್ನಾಟಕದ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಹಲವು ನಾಯಕರು ಈ ಕುರಿತು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರೊಬ್ಬರು ಈ ಕುರಿತು ಮಾತನಾಡಿದ್ದು, ಕೆಪಿಸಿಸಿ ಕಾರಣ ಕೇಳಿ ನೋಟಿಸ್ ನೀಡಿದೆ. 7 ದಿನದಲ್ಲಿ ವಿವರಣೆ ನೀಡಬೇಕು ಎಂದು ಸೂಚನೆ ನೀಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಮ್ಮ ತವರು ಜಿಲ್ಲೆಯ ಶಾಸಕರಿಗೆ ನೋಟಿಸ್ ನೀಡಿದ್ದಾರೆ. ರಾಮನಗರ ಕ್ಷೇತ್ರದ ಶಾಸಕ ಹೆಚ್. ಎ. ಇಕ್ಬಾಲ್ ಹುಸೇನ್‌ಗೆ ನೋಟಿಸ್ ನೀಡಲಾಗಿದೆ. ಈ ಮೂಲಕ ನಾಯಕತ್ವ ಬದಲಾವಣೆ ಕುರಿತು ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಪಕ್ಷದ ನಾಯಕರಿಗೆ ಸ್ಪಷ್ಟ ಸಂದೇಶವನ್ನು ರವಾನೆ ಮಾಡಲಾಗಿದೆ.
ಶಾಸಕ ಹೆಚ್. ಎ. ಇಕ್ಬಾಲ್ ಹುಸೇನ್‌ಗೆ ನೀಡಿರುವ ನೋಟಿಸ್‌ನಲ್ಲಿ ಶಾಸಕರು, ರಾಮನಗರ ವಿಧಾನಸಭೆ ಆದ ತಾವು ಇಂದು ಮಾಧ್ಯಮಗಳಿಗೆ ಮಾನ್ಯ ಮುಖ್ಯಮಂತ್ರಿಗಳ ಬದಲಾವಣೆ ವಿಷಯದಲ್ಲಿ, ಪಕ್ಷದಲ್ಲಿ ಗೊಂದಲ ಹಾಗೂ ಮುಜುಗರ ಉಂಟುಮಾಡುವಂತಹ ಬಹಿರಂಗ ಹೇಳಿಕೆಗಳನ್ನು ನೀಡಿರುತ್ತೀರಿ ಎಂದು ಉಲ್ಲೇಖಿಸಲಾಗಿದೆ.
ತಮ್ಮ ಈ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುವುದಲ್ಲದೆ, ಪಕ್ಷದ ಶಿಸ್ತು ಉಲ್ಲಂಘನೆ ಆಗಿರುತ್ತದೆ. ತಮ್ಮ ಈ ಅಶಿಸ್ತಿನ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ತಾವುಗಳು ಈ ನೋಟಿಸ್ ತಲುಪಿದ ಒಂದು ವಾರದ ಒಳಗಾಗಿ ತಮ್ಮ ಹೇಳಿಕೆ ಬಗ್ಗೆ ಸಮಜಾಯಿಷಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ್ದ ಶಾಸಕ ಹೆಚ್. ಎ. ಇಕ್ಬಾಲ್ ಹುಸೇನ್, “ಡಿ. ಕೆ. ಶಿವಕುಮಾರ್ ಈ ಅವಧಿಯಲ್ಲಿಯೇ ಮುಖ್ಯಮಂತ್ರಿಯಾಗಬೇಕು. ಇದಕ್ಕೆ ಶಾಸಕರ ಬೆಂಬಲ ಇದೆ. ಹೈಕಮಾಂಡ್ ಅವರಿಗೂ ಅವಕಾಶ ನೀಡಬೇಕು” ಎಂದು ಹೇಳಿದ್ದರು.
“ಡಿ. ಕೆ. ಶಿವಕುಮಾರ್ ಅವರು ತಳಮಟ್ಟದಿಂದ ಪಕ್ಷ ಸಂಘಟಿಸಿದ್ದಾರೆ. ಪೂರ್ಣ ಬಹುತದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಕಾರಣಕರ್ತರಾಗಿದ್ದಾರೆ. ಸುಮಾರು 100 ಶಾಸಕರು ಸಿಎಂ ಬದಲಾವಣೆ ಪರವಾಗಿದ್ದಾರೆ” ಎಂದು ಹೇಳಿಕೆ ಕೊಟ್ಟಿದ್ದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿನಲ್ಲಿದ್ದು, ಶಾಸಕರ ಜೊತೆ ಸಭೆಯನ್ನು ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಹೆಚ್. ಎ. ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು.
ಹೆಚ್. ಎ. ಇಕ್ಬಾಲ್ ಹುಸೇನ್ ಹೇಳಿಕೆ ಬಳಿಕ ಪ್ರತಿಕ್ರಿಯೆ ನೀಡಿದ್ದ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ನೋಟಿಸ್ ನೀಡಲಾಗುತ್ತದೆ ಎಂದು ಹೇಳಿದ್ದರು. ಈಗ ನೋಟಿಸ್ ಜಾರಿಗೊಳಿಸಿ ವಿವರಣೆ ಕೇಳಲಾಗಿದೆ.
ಶಾಸಕರ ಈ ಹೇಳಿಕೆ, ನೋಟಿಸ್ ನೀಡಿದ ವಿಚಾರದ ಕುರಿತು ಪ್ರತಿಪಕ್ಷಗಳ ನಾಯಕರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಆರ್. ಅಶೋಕ, ‘ಮಗು ಚಿವುಟೋದು ಅವರೇ ತೊಟ್ಟಿಲು ತೂಗೋದು ಅವರೇ…ತುಂಬಾ ಚೆನ್ನಾಗಿದೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ ನಿಮ್ಮ ನಾಟಕ’ ಎಂದು ಹೇಳಿದ್ದಾರೆ.
‘ಮಾಧ್ಯಮಗಳ ಮುಂದೆ ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶನದ ನಾಟಕ, ತೆರೆಮರೆಯಲ್ಲಿ ಬೆಂಬಲಿಗರ ಮೂಲಕ ಬೆನ್ನಿಗೆ ಚೂರಿ ಇರಿತ. ಒಟ್ಟಿನಲ್ಲಿ ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ಸಿದ್ದರಾಮಯ್ಯ ಹಾಗು ಡಿ.ಕೆ. ಶಿವಕುಮಾರ್ ಅವರ ಜಗಳದಲ್ಲಿ ಕರ್ನಾಟಕ ಬಡವಾಗುತ್ತಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.