ಕಲಬುರಗಿ: ರಾಜೀವ್ ಗಾಂಧಿ ವಸತಿ ಯೋಜನೆ ವಿಚಾರಕ್ಕೆ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ತಮ್ಮದೇ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಹಣ ನೀಡಿದವರಿಗಷ್ಟೇ ಮನೆ ಮಂಜೂರು ಸಿಗುತ್ತಿದೆ ಅಂತಾ ಕಾಂಗ್ರೆಸ್ ಶಾಸಕ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಹೇಳಲಾಗಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗೆ ಬಿಆರ್ ಪಾಟೀಲ್ ಮಾತನ್ನಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ಅದಾಗಿದೆ. ಆಡಿಯೋದಲ್ಲಿ ವಸತಿ ಯೋಜನೆಯಡಿ ಹಣ ನೀಡಿದವರಿಗಷ್ಟೇ ಮನೆ ಮಂಜೂರು ಮಾಡಲಾಗ್ತಿದೆ. ನಮ್ಮ ಸರ್ಕಾರವನ್ನೇ ದೂರಲು ನನಗೆ ಬೇಸರವಾಗಿದೆ ಎಂದಿದ್ದಾರೆ.
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಗೋಲ್ಮಾಲ್ ನಡೆಯುತ್ತಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇನ್ನು ಆಡಿಯೋದಲ್ಲಿ ಶಾಸಕ ಬಿಆರ್ ಪಾಟೀಲ್, ಸಚಿವ ಜಮೀರ್ ಖಾನ್ ಆಪ್ತ ಕಾರ್ಯದರ್ಶಿಗೆ ಕರೆ ಮಾಡಿ, ಸರ್ಕಾರಿ ಮನೆಗಳ ಹಂಚಿಕೆಗೆ ಲಂಚ ಪಡೆಯುತ್ತಿರುವ ಬಗ್ಗೆ ಆರೋಪಿಸಿದ್ದಾರೆ. ಹಣ ನೀಡಿದವರಿಗಷ್ಟೇ ವಸತಿ ನಿಗಮದಲ್ಲಿ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಯಾವ ಕ್ಷೇತ್ರದಲ್ಲಿ ಹೀಗೆ ಆಗಿದೆ ಮಾಹಿತಿ ನೀಡಿ. ಕೊಡಲೇ ಕ್ರಮಕೈಗೊಳ್ಳುವುದಾಗಿ ಜಮೀರ್ ಖಾನ್ ಆಪ್ತ ಕಾರ್ಯದರ್ಶಿ ಹೇಳಿದ್ದಾರೆ. ಆಳಂದ ಮತ್ತು ಅಫಜಲಪುರ ಕ್ಷೇತ್ರ ಸೇರಿದಂತೆ ಹಲವೆಡೆ ಒಟ್ಟು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ ಎಂದು ವೈರಲ್ ಆಡಿಯೋದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.