ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿಯ 169ರಲ್ಲಿ ಹಾದು ಹೋಗುವ ಮಿಜಾರಿನಲ್ಲಿ ಡಿಬಿಎಲ್‌ನ ಅವೈಜ್ಞಾನಿಕ ಕಾಮಗಾರಿಗೆ ಕಳೆದ ಒಂದು ವಾರದ ಹಿಂದೆ ಬಲಿಯಾಗಿರುವ ಗಂಜಿಮಠದ ನಿವಾಸಿ ಅಬ್ದುಲ್ ಖಾದರ್ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಹಾಗೂ ಕಂಪನಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮೃತರ ಪುತ್ರ ಸಾಹುಲ್ ಹಮೀದ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಸಂಸ್ಥೆಯವರು ಪಾದಚಾರಿಗಳ ಮತ್ತು ವಾಹನ ಸವಾರರ ಸುರಕ್ಷತೆಯ ಬಗ್ಗೆ ಗಮನ ಹರಿಸಿಲ್ಲ ವಾಮಂಜೂರು, ಕೈಕಂಬ ಮೂಡುಬಿದಿರೆ ಸೇರಿದಂತೆ ಅಲ್ಲಲ್ಲಿ ಹೊಂಡಗಳನ್ನು ತೆರೆದಿಟ್ಟು ವಾಹನ ಸವಾರರ ಪ್ರಾಣಕ್ಕೆ ಆಪತ್ತನ್ನು ತಂದೊಡ್ಡುತ್ತಿದ್ದಾರೆ ಇದರ ಪರಿಣಾಮವಾಗಿಯೇ ತನ್ನ ತಂದೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಕ್ಕೂ ಮೊದಲು ಸರಣಿ ಅಪಘಾತಗಳು ನಡೆದಿದ್ದು, ಅವರುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಆದರೂ ಹೆದ್ದಾರಿಯಲ್ಲಿ ತೆರೆದಿಟ್ಟ ಹೊಂಡಗಳನ್ನು ಮುಚ್ಚುವ ವ್ಯವಸ್ಥೆಯಾಗಲಿ, ಸೂಚನಾ ಫಲಕ, ಬ್ಯಾರಿಕೇಡ್ ಅಳವಡಿಸುವ ಕೆಲಸವನ್ನು ಮಾಡದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ಮೂಡುಬಿದಿರೆ ತಾಲೂಕು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಬ್ದುಲ್ ಸಲಾಂ ಮಾತನಾಡಿ, ಅಪಘಾತಗಳು ಪುನರಾವರ್ತನೆಯಾಗದಂತೆ, ರಾಷ್ಟ್ರಮಟ್ಟದ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮಕೈಗೊಳ್ಳಬೇಕು, ಕಾಮಗಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಜವಾಬ್ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದ ಅವರು ದುರ್ಘಟನೆಗೆ ಕಾರಣವಾದ ಸರ್ಕಾರ ಹಾಗೂ ಸಂಬಂಧಿತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಭಾಗದ ಅಧಿಕಾರಿಗಳು ಮೃತ ಅಬ್ದುಲ್ ಖಾದರ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ತಕ್ಷಣ ನೀಡಬೇಕೆಂದು ಆಗ್ರಹಿಸಿದರು.