ಟಿ.ವಿ. ಮುಂದೆ ಕೂತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಬೇಕಾದ್ದನ್ನು ನೋಡಲು ಕುಳಿತರೆ ಬೇಡವಾದದ್ದನ್ನೂ ಅದು ತೋರಿಸುತ್ತದೆ. ತಪ್ಪು ನಮ್ಮದೆ, ರಿಮೋಟ್ ಕಂಟ್ರೋಲ್ ನಮ್ಮ ಕೈಯಲ್ಲೇ ಇರುವಾಗ ಟೀವಿಯನ್ನು ಬೈದು ಪ್ರಯೋಜನವಿಲ್ಲ.
ವಿಶ್ವನ ಮನೆಯಲ್ಲಿ ಟಿ.ವಿ. ನೋಡುತ್ತ ಕುಳಿತಿದ್ದಾಗ, ಡಾಂಕಿ ಡರ್ಬಿ ರೇಸ್ ತೆರೆ ಮೇಲೆ ಮೂಡಿಬಂತು. ಕತ್ತೆಗಳ ಓಟ ಅದ್ಭುತವಾಗಿತ್ತು. ಪ್ರೇಕ್ಷಕರು ಹುಚ್ಚೆದ್ದು ಕತ್ತೆಗಳಂತೆ ಕುಣಿದಾಡುತ್ತಿದ್ದರು, ಕತ್ತೆಗಳ ಜೊತೆ ಕೆಲವರು ಓಡಿದರು. ಹಲವರು ಬಿದ್ದ, ಗಾಯಗೊಂಡರು, ಕೆಲವರು ಪೆಟ್ಟು ತಿಂದು ನರಳಿದರು, ಅದೊಂದು ಯಶಸ್ವಿ ಕತ್ತೆಗಳ ಓಟ ಆಗಿತ್ತು. ಇದಕ್ಕೆ ಬರ‍್ರೋ ರೇಸಿಂಗ್ ಎನ್ನುತ್ತಾರೆ. ವಿದೇಶದಲ್ಲಿ ಇದು ಜನಪ್ರಿಯ ರೇಸ್.
ಅಮೇರಿಕದ ಪಶ್ಚಿಮ ರಾಜ್ಯಗಳಲ್ಲಿ ಕತ್ತೆಗಳಿಗೆ ವಿಪರೀತ ಡಿಮ್ಯಾಂಡು. ಒದೆಸಿಕೊಳ್ಳಲು ಅಲ್ಲ ಅವುಗಳನ್ನು ರೇಸಿನಲ್ಲಿ ಓಡಿಸಿ ಡಾಲರ್ ಗಳಿಸಿಕೊಳ್ಳಲು. ನ್ಯೂ ಮೆಕ್ಸಿಕೊ, ಕೊರ‍್ಯಾಡೋ, ಆರಿಜೋನಾ, ಕ್ಯಾಲಿಫೋರ್ನಿಯ, ಮುಂತಾದ ರಾಜ್ಯಗಳಲ್ಲಿ ವರ್ಷಕ್ಕೊಮ್ಮೆ ಕತ್ತೆಗಳ ಐ.ಪಿ.ಎಲ್. ಟೈಪ್ ರೇಸ್ ನಡೆಯುತ್ತೆ. ಡಾಂಕಿ ಡರ್ಬಿಗೆ ಜನ ಮುಗಿಬಿದ್ದು ಬರುತ್ತಾರೆ, ಲಕ್ಷಗಳಲ್ಲಿ ಬೆಟ್ಟಿಂಗ್ ಕಟ್ಟುತ್ತಾರೆ, ಕತ್ತೆಗಳನ್ನ ನಂಬಿ ಕೋಟಿ ಕೋಟಿಗಳಿಸಿದವರಿದ್ದಾರೆ. ಸೋತು ಲದ್ದಿಯನ್ನು ತಿಂದು ಓಕರಿಸಿದವರಿದ್ದಾರೆ. ಟಿ.ವಿ.ಯಲ್ಲಿ ಬರ‍್ರೋ ರೇಸ್ ನೋಡುತ್ತಿದ್ದ ವಿಶ್ವ ಚಪ್ಪಾಳೆ ಹೊಡೆದ, ವಿಶಾಲುಗೆ ಸಿಟ್ಟು ಬಂತು.
“ರೀ, ಅದನ್ನೇನು ಬಿಟ್ ಕಣ್ಣು ಬಿಟ್ಟ ಹಾಗೆ ನೋಡ್ತಾ ಕೂತಿದ್ದೀರ? ನಿಮ್ಮ ಫ್ರೆಂಡ್ ಇಲ್ಲಿ ಇರೋವಾಗ ಅಲ್ಲಿ ಕತ್ತೆಗಳನ್ನು ಯಾಕೆ ನೋಡ್ತೀರ?” ಎಂದು ರೇಗಿದಳು.
“ಹ್ಞಾಂ, ಹೌದಮ್ಮ ಅದು ಕತ್ತೆಗಳ ಐ.ಪಿ.ಎಲ್. ಮ್ಯಾಚು, ಅವು ಓಡೋದೇ ಜನರಿಗಾಗಿ, ನೋಡಿ ಆನಂದ ಪಡಬೇಕಾದ್ದು ನಮ್ಮ ಧರ್ಮ” ಎಂದ ವಿಶ್ವ.
“ಕತ್ತೆಗಳು ಓಡಿದರೆ ನಾವ್ಯಾಕೆ ಸಂತೋಷ ಪಡಬೇಕು?” ವಿಶಾಲು ಪ್ರಶ್ನೆ.
“ಸಂತೋಷ ಮನುಷ್ಯನ ಸಹಜ ಗುಣ, ಯಾವುದೇ ಮನೋರಂಜನೆ ಕಂಡರೆ ನಮಗೆ ಆನಂದ ಆಗುತ್ತೆ, ಚಪ್ಪಾಳೆ ತಟ್ತೀವಿ, ಶಿಳ್ಳೆ ಹೊಡಿತೀವಿ, ಅದನ್ನು ನೇರವಾಗಿ ನೋಡೋಕೆ ಹೋಗಿ ಜನ ಜಂಗುಳಿಯ ಕಾಲ್ತುಳಿತಕ್ಕೆ ಸಿಕ್ಕಿ ಸತ್ತೂ ಹೋಗ್ತೀವಿ”. ಎಂದ ವಿಶ್ವ.
“ಪಾಕಿಸ್ತಾನದಲ್ಲೂ ಸಹ ಕತ್ತೆಗಳ ರೇಸ್ ಇದೆ” ಎಂದೆ.
“ಹೂಂ ನಾನು ಕೇಳಿದ್ದೀನಿ, ಪಾಕಿಸ್ತಾನದಲ್ಲಿ ತುಂಬಾ ಕತ್ತೆಗಳಿವೆಯಂತೆ?” ಎಂದಳು ವಿಶಾಲು.
“ಅವು ನಿಮ್ಮ ಫ್ಯಾಮಿಲಿ ಅಲ್ವಾ ವಿಶಾಲು, ಅವುಗಳನ್ನ ಇಲ್ಲಿ ಇಟ್ಟುಕೊಂಡರೆ ನಮ್ಮ ಮನೆ ಮುಂದೇನೇ ಇರುತ್ತೆ ಅಂತ ಅಲ್ಲಿಗೆ ರವಾನೆ ಮಾಡಿಬಿಟ್ವಿ” ಎಂದ ವಿಶ್ವ. ನಗೆ ಮಾತಿಗೆ ವಿಶಾಲು ಕೋಪದಿಂದ ಭುಸುಗುಟ್ಟಿದಳು, ನಾನು ಗೂಗಲ್ ಆಂಟಿ ಸಹಾಯ ಪಡೆದು ಅಲ್ಲಿದ್ದ ವಿಷಯ ಓದಿ ಹೇಳಿದೆ.
“ಪಾಕಿಸ್ತಾನದಲ್ಲಿ ವಿಪರೀತ ಕತ್ತೆಗಳಿವೆ, ಕಳೆದ ವರ್ಷ ೫.೮ ಮಿಲಿಯನ್ ಇದ್ದ ಕತ್ತೆಗಳ ಸಂಖ್ಯೆಗೆ ಈ ವರ್ಷ ಇನ್ನೊಂದು ಲಕ್ಷ ಸೇರಿದೆೆ”.
“ರ‍್ವಾಗಿಲ್ಲ ಒದೆಯೋ ಕತ್ತೆಗಳಿಂದಲೂ ಚೆನ್ನಾಗಿ ದುಡ್ಡು ಮಾಡ್ತಾರೆ!”
“ಪಾಕ್‌ನಲ್ಲಿ ಮುಖ್ಯವಾಗಿ ಎರಡು ಐಟಮ್ಸ್ ರಫ್ತು ಆಗ್ತಿರುತ್ತೆ, ಕಿಲ್ಲಿಂಗ್ ಟ್ರೆನಿಂಗ್ ಪಡೆದ ಉಗ್ರರನ್ನ ವಿದೇಶಕ್ಕೆ ರಫ್ತು ಮಾಡುತ್ತೆ, ರನ್ನಿಂಗ್ ಟ್ರೆನಿಂಗ್ ಪಡೆದ ಕತ್ತೆಗಳನ್ನು ವಿದೇಶಕ್ಕೆ ರಫ್ತು ಮಾಡುತ್ತೆ” ಎಂದೆ. ವಿಶ್ವ ಕತ್ತೆಗಳ ರೇಸ್‌ನ್ನು ನೋಡುತ್ತ ಮಧ್ಯೆ ಮಧ್ಯೆ ಚಪ್ಪಾಳೆ ತಟ್ಟುತ್ತಿದ್ದ.
“ನೋಡಿ ನಮ್ಮ ಯಜಮಾನ್ರು ನನ್ನ ಇಷ್ಹೆಟತ್ತು ನನ್ನ ರೇಗಿಸ್ತಾ ಇದ್ರು, ಟೀವೀಲಿ ಓಡ್ತಿರೋದು ತಮ್ಮ ಫ್ಯಾಮಿಲಿ ಮೆಂರ‍್ಸ್ ಏನೋ ಅನ್ನೋ ಥರ ಎಲ್ಲಾ ಮರೆತು ಕೂತಿದ್ದಾರೆ, ಈ ಕತ್ತೆ ಮ್ಯಾಚು ನೋಡಿದಾಗ ನಮ್ಮ ಐ.ಪಿ.ಎಲ್. ದುರಂತ ನೆನಪಾಗ್ತಿದೆ” ಎಂದಳು.
“ಹೇಗೆ?” ವಿಶ್ವ ಕೇಳಿದ.
“ಆರ್.ಸಿ.ಬಿ.ಯಲ್ಲಿ ಕರ್ನಾಟಕದ ಪ್ಲೇರ‍್ಸ್ ಎಷ್ಟು ಮಂದಿ ಇದ್ರು ? ಇತರ ರಾಜ್ಯಗಳ ಕ್ರಿಕೆಟಿಗರ ಜೊತೆ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಆಟಗಾರರೂ ಇದ್ದರು, ಅದಕ್ಕೆ ಬೆಂಗಳೂರು ಟೀಮ್ ಅಂತ ಹೆಸರಿಡ್ತಾರೆ, ಅದು ಗೆಲ್ಲಲಿ ಅಂತ ನಾವು ಎಗರಾಡ್ತೀವಿ, ಹರಕೆ ಹರ‍್ತೀವಿ” ಎಂದಳು ವಿಶಾಲು.
“ಹೌದು, ವಿದೇಶಗಳಲ್ಲಿಯೂ ಹಾಗೇ, ನಮ್ಮ ಕತ್ತೆ ತಂಡ ಗೆಲ್ಲಲಿ ಅಂತ ದೇವರಿಗೆ ಪಾರ್ಥನೆ ಮಾಡ್ತ್ತಾರೆ, ನನ್ನ ಕತ್ತೆಗೆ ಜಯವಾಗಲಿ, ನನ್ನ ಕತ್ತೆ ಕುದುರೆಯಂತೆ ಓಡಲಿ, ನನ್ನ ಕತ್ತೆ ಓಡುವಾಗ ಲದ್ದಿ ಹಾಕದಿರಲಿ ಎಂದೆಲ್ಲ ಹರಕೆ ಹೊರುತ್ತಾರೆ” ಎಂದೆ.
“ಅರ್ಜೆಂಟ್ ಇದ್ದಾಗ ಲದ್ದಿ ಯಾಕ್ ಹಾಕಬರ‍್ದು ?” ಕೇಳಿದಳು ವಿಶಾಲು.
“ಓಡ್ತಾ ಲದ್ದಿ ಹಾಕೋಕ್ ಆಗಲ್ಲ, ಅದಕ್ಕಾಗಿ ಕತ್ತೆ ಒಂದು ನಿಮಿಷ ನಿಂತ್ಕೋಬೇಕಾಗುತ್ತೆ, ಆಗ ಹಿಂದಿನಿಂದ ಬರೋ ಕತ್ತೆಗಳು ಓವರ್ ಟೇಕ್ ಮಾಡುತ್ತೆ” ಎಂದೆ.
ವಿಶಾಲುಗೆ ಅನುಮಾನ ಬಂತು,
“ಬೇರೆ ಬೇರೆ ಕಡೆಗಳಿಂದ ಕೊಂಡು ತಂದ ಕತ್ತೆಗಳನ್ನ ಡರ್ಬಿ ರೇಸ್‌ನಲ್ಲಿ ಓಡಿಸಿ ಜನ ಮಜಾ ತಗೋತಾರೆ, ಅಲ್ಲಿ ತೊಂದರೆ ಇರೊಲ್ವಾ?”
“ಕತ್ತೆ ರೇಸ್‌ನಲ್ಲೂ ತೊಂದರೆಗಳಿವೆ ಮೇಡಂ, ಅಮೇರಿಕಾದಲ್ಲಿ ಶಾಲಾ ಮಕ್ಕಳು ಕತ್ತೆಗಳ ಜೊತೆ ತಮಾಷೆಗೆ ಓಡುವುದುಂಟು, ಆ ರೀತಿ ಓಡುವಾಗ ಕತ್ತೆಗಳು ಗಾಬರಿಯಿಂದ ಮಕ್ಕಳನ್ನು ಓದ್ದು ಕೊಂದಿರೋ ನಿದರ್ಶನಗಳಿವೆ” ಎಂದೆ.
“ಈ ಸಲ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆರ್.ಸಿ.ಬಿ. ಗೆದ್ದಿದೆ, ಕಪ್ಪು ನಮ್ಮದೇ ವಿಶಾಲು” ಎಂದು ವಿಶ್ವ ಟಿ.ವಿ. ಆಫ್ ಮಾಡಿ ಚರ್ಚೆಗೆ ಬಂದ.
“ಕಪ್ ಅಲ್ಲ ಅದು ಕಪ್ಪು ಚುಕ್ಕೆ” ಎಂದಳು ವಿಶಾಲು.
“ಚೆಸ್ ಆಟದಲ್ಲಿ ವಿಶ್ವ ಚ್ಯಾಂಪಿಯನ್ಸ್ ಆದ ಭಾರತೀಯರು ಇದ್ದಾರೆ, ಒಲಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್, ಶೂಟಿಂಗ್, ಹಾಕಿ, ಬಿಲ್ಲುಗಾರಿಕೆ, ಕುಸ್ತಿ ಪಂದ್ಯಗಳಲ್ಲಿ ಭಾರತ ಗೆದ್ದಿದೆ. ವಿಶ್ವ ಮಟ್ಟದಲ್ಲಿ ಗೆದ್ದ ಕ್ರೀಡಾ ಪಟುಗಳನ್ನು ನೋಡೋಕೆ ಜನಗಳೇ ಬರೋದಿಲ್ಲ, ಈ ಚೌಚೌ ಕ್ರಿಕೆಟ್ ಟೀಂ ಬಗ್ಗೆ ಯಾಕಿಷ್ಟು ಹುಚ್ಚು?” ಎಂದೆ.
“ಕ್ಯಾಲಿಫೋರ್ನಿಯ ಡಾಂಕಿ ಡರ್ಬಿಯಲ್ಲಿ ಒಂದು ಶಾಲಾ ಮಗು ಕತ್ತೆಗಳ ಕಾಲಿಗೆ ಸಿಕ್ಕಿ ಮೃತಪಡ್ತು, ಸರ್ಕಾರ ಏನು ಕ್ರಮ ತಗೋಬಹುದು?” ಎಂಬ ವಿಷಯ ಪ್ರಸ್ತಾಪಕ್ಕೆ ಬಂತು. “ಕತ್ತೆ ಟೀಂ ಮ್ಯಾನೇಜರ್ ಮೇಲೆ ಕ್ರಮ ತಗೋಬೇಕು” ಎಂದಳು ವಿಶಾಲು.
“ಅಲ್ಲ, ಕತ್ತೇನ ಮಾರಿದ ವಿದೇಶಿಯರ ಮೇಲೆ ಕ್ರಮ ತಗೋಬೇಕು, ಅದನ್ನು ವಿಮಾನ ಅಥವಾ ಹಡಗಿನಲ್ಲಿ ಸಾಗಿಸರ‍್ತಾರೆ. ವಿಮಾನ ಸಂಸ್ಥೆಯ ಮೇಲೆ, ಹಡಗಿನ ಕ್ಯಾಪ್ಟನ್ ಮೇಲೆ ಉಗ್ರ ಕ್ರಮ ತಗೊಂಡು ತಲೆ ದಂಡ ವಿಧಿಸಬೇಕು” ಎಂದ ವಿಶ್ವ.
“ಇಲ್ಲಿ ತೊಂದರೆ ಆಗಿದ್ದಕ್ಕೆ ಬೇರೆ ಎಲ್ಲೋ ಇರುವ ಅಮಾಯಕರ ತಲೆ ದಂಡ ಸರಿಯಿಲ್ಲ” ಎಂದೆ.
“ಅದೇ ಸರಿ, ಇದಕ್ಕೆ ಪೂರ್ವ ನಿದರ್ಶನ ಕರ್ನಾಟಕದಲ್ಲಿ ಇದೆ, ಆರ್.ಸಿ.ಬಿ ಪಟುಗಳ ಅಭಿನಂದನಾ ಸಮಾರಂಭದಲ್ಲಿ ನಡೆದ ಕಾಲ್ತುಳಿತಕ್ಕೆ ಐದು ಮಂದಿ ಅಮಾಯಕ ಪೋಲೀಸರ ತಲೆ ದಂಡ ಆಗಿದೆಯಲ್ಲ?” ಎಂದ ವಿಶ್ವ !